ADVERTISEMENT

Uttarakhand Election 2022: ಕಾಂಗ್ರೆಸ್‌ಗೆ ಹರ್ಕತ್ ರಾವತ್, ಸೊಸೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 18:47 IST
Last Updated 21 ಜನವರಿ 2022, 18:47 IST
ದೆಹಲಿಯಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹರಿಶರ್ ರಾವತ್ ಅವರು ಹರ್ಕತ್ ಸಿಂಗ್ ರಾವತ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು                 –ಪಿಟಿಐ ಚಿತ್ರ
ದೆಹಲಿಯಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹರಿಶರ್ ರಾವತ್ ಅವರು ಹರ್ಕತ್ ಸಿಂಗ್ ರಾವತ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು      –ಪಿಟಿಐ ಚಿತ್ರ   

ಡೆಹ್ರಾಡೂನ್‌/ನವದೆಹಲಿ: ಬಿಜೆಪಿಯಿಂದ ಗುರುವಾರವಷ್ಟೇ ಉಚ್ಚಾಟಿತರಾಗಿದ್ದ ಉತ್ತರಾಖಂಡದ ಮಾಜಿ ಸಚಿವ ಹರ್ಕತ್ ಸಿಂಗ್ ರಾವತ್ ಅವರು ಶುಕ್ರವಾರ ತಮ್ಮ ಸೊಸೆ ಅನುಕೃತಿ ಗುಸೇನ್‌ ಜತೆಗೆ ಕಾಂಗ್ರೆಸ್‌ ಸೇರಿದ್ದಾರೆ.

ಉತ್ತರಾಖಂಡ ಕಾಂಗ್ರೆಸ್‌ ಉಸ್ತುವಾರಿ ಹರೀಶ್ ರಾವತ್ ಅವರ ಸಮ್ಮುಖದಲ್ಲಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಪಕ್ಷ ಸೇರಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತಮಗೆ ಮತ್ತು ತಮ್ಮ ಸೊಸೆಗೆ ಟಿಕೆಟ್‌ ನೀಡುವಂತೆ ಒತ್ತಾಯಿಸಿದ ಕಾರಣಕ್ಕೆ ಬಿಜೆಪಿ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿತ್ತು. ಪಕ್ಷದಿಂದಲೂ ಅವರನ್ನು ಉಚ್ಚಾಟಿಸಿತ್ತು.

ಈ ಮೊದಲು ಕಾಂಗ್ರೆಸ್‌ನಲ್ಲೇ ಇದ್ದ ಹರ್ಕತ್ ಅವರು 2016ರಲ್ಲಿ ಹರೀಶ್ ರಾವತ್ ವಿರುದ್ಧ ಬಂಡೆದ್ದು, ಪಕ್ಷವನ್ನು ತೊರೆದಿದ್ದರು. ಆನಂತರ ಬಿಜೆಪಿ ಸೇರಿದ್ದರು. 2017ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಬಿಜೆಪಿಯು ಗುರುವಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಿಲ್ಲ.

ADVERTISEMENT

ಹರ್ಕತ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಾದರೆ ಅವರು ಕ್ಷಮೆ ಯಾಚಿಸಬೇಕು ಎಂದು ಹರೀಶ್ ರಾವತ್ ಅವರು ಷರತ್ತು ಹಾಕಿದ್ದರು. ಆದರೆ ಈಗ ಯಾವುದೇ ಷರತ್ತಿಲ್ಲದೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಸ್ವತಃ ಹರ್ಕತ್ ಸಿಂಗ್ ಹೇಳಿದ್ದಾರೆ.

ಹರ್ಕತ್ ಅವರಿಗೆ ಕೇದಾರನಾಥ ಕ್ಷೇತ್ರ ಮತ್ತು ಅನುಕೃತಿ ಅವರಿಗೆ ಲಾನ್ಸ್‌ಡೋವ್ನೆ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡುವುದಾಗಿ ಕಾಂಗ್ರೆಸ್‌ ಹೇಳಿದೆ. ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಇನ್ನಷ್ಟೇ ಬಿಡುಗಡೆ ಮಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.