ADVERTISEMENT

ಉತ್ತರಾಖಂಡದಲ್ಲಿ ಹಿಮನದಿ ಸ್ಫೋಟ: 125 ಮಂದಿ ಕಣ್ಮರೆ

ಉತ್ತರಾಖಂಡದಲ್ಲಿ ಘಟನೆ l ಪ್ರವಾಹದಲ್ಲಿ 7 ಸಾವು l 2 ಜಲವಿದ್ಯುತ್‌ ಘಟಕಗಳಿಗೆ ಹಾನಿ

ಏಜೆನ್ಸೀಸ್
Published 7 ಫೆಬ್ರುವರಿ 2021, 21:39 IST
Last Updated 7 ಫೆಬ್ರುವರಿ 2021, 21:39 IST
ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಯಲ್ಲಿ ತೊಡಗಿರುವ ಭದ್ರತಾ ಪಡೆಗಳು
ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಯಲ್ಲಿ ತೊಡಗಿರುವ ಭದ್ರತಾ ಪಡೆಗಳು    

ಡೆಹ್ರಾಡೂನ್/ನವದೆಹಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದ ಬಳಿ ಸಂಭವಿಸಿದ ಹಿಮನದಿ ಸ್ಫೋಟದಿಂದ ಉಂಟಾದ ದಿಢೀರ್ ಪ್ರವಾಹಕ್ಕೆ ಸಿಲುಕಿ 7 ಮಂದಿ ಮೃತಪಟ್ಟಿದ್ದಾರೆ. 125 ಮಂದಿ ಕಣ್ಮರೆಯಾಗಿದ್ದಾರೆ. ಕಣ್ಮರೆಯಾದವರನ್ನು ಪತ್ತೆಮಾಡಲು ಶೋಧಕಾರ್ಯ ನಡೆಯುತ್ತಿದೆ.

ಜೋಶಿಮಠದಿಂದ ಪೂರ್ವದಿಕ್ಕಿನಲ್ಲಿ ಇರುವ ನಂದಾದೇವಿ ಪರ್ವತದಲ್ಲಿ ಇರುವ ಹಿಮನದಿಗಳಲ್ಲಿ ಒಂದರಲ್ಲಿ ಭಾನುವಾರ ಬೆಳಿಗ್ಗೆ 10ರ ವೇಳೆಗೆಸ್ಫೋಟ ಸಂಭವಿಸಿದೆ. ಹಿಮನದಿಯ ನೀರ್ಗಲ್ಲು ಮುರಿದುಬಿದ್ದ ಕಾರಣ, ಋಷಿಗಂಗಾ ನದಿಯಲ್ಲಿ ಪ್ರವಾಹ ಉಂಟಾಗಿದೆ. ಋಷಿಗಂಗಾ ನದಿಯ ದಂಡೆಯಲ್ಲಿರುವ ರೈನಿ ಪ್ರದೇಶ ದಲ್ಲಿ ಋಷಿಗಂಗಾ ಜಲವಿದ್ಯುತ್ ಯೋಜನೆಯ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರು ಈ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಯೋಜನೆಯ ಭಾಗವಾಗಿ ನಿರ್ಮಿಸಲಾಗುತ್ತಿದ್ದ ಅಣೆಕಟ್ಟೆಯು ರಭಸದ ಪ್ರವಾಹದಲ್ಲಿ ಕೊಚ್ಚಿಹೋಗಿದೆ.

ನಂತರ ಪ್ರವಾಹವು ಧೌಲಿಗಂಗಾ ನದಿಯನ್ನು ಸೇರಿ ಜೋಶಿಮಠದತ್ತ ಮುನ್ನುಗ್ಗಿದೆ. ಜೋಶಿಮಠಕ್ಕೂ ಮುನ್ನ ತಪೋವನದಲ್ಲಿ ನಿರ್ಮಿಸಲಾಗುತ್ತಿರುವ ಮತ್ತೊಂದು ಜಲವಿದ್ಯುತ್ ಯೋಜನೆಯ ಅಣೆಕಟ್ಟೆಯೂ ಈ ಪ್ರವಾಹದಲ್ಲಿ ಕೊಚ್ಚಿಹೋಗಿದೆ. ಇಲ್ಲಿಯೂ ಹಲವು ಕಾರ್ಮಿಕರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ.

ADVERTISEMENT

ರೈನಿ, ತಪೋವನ ಮತ್ತು ಜೋಶಿಮಠದಲ್ಲಿ ನೂರಾರು ಮನೆಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ. ಪ್ರವಾಹ ಉಂಟಾದ ಒಂದು ಗಂಟೆಯ ಒಳಗೇ ಇಂಡೊ-ಟಿಬೆಟಿಯನ್ ಗಡಿ ಪೊಲೀಸ್‌ ಪಡೆಯ ಒಂದು ತುಕಡಿ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯ ಕೈಗೊಂಡಿದೆ. ಎಚ್ಚರಿಕೆ ಗಂಟೆ ಮೊಳಗಿಸಿದ ಕಾರಣ, ಮೂರೂ ಗ್ರಾಮದ ಜನರು ಎತ್ತರದ ಪ್ರದೇಶಗಳಿಗೆ ತೆರಳಿ, ಜೀವ ಉಳಿಸಿಕೊಂಡಿದ್ದಾರೆ. ತಪೋವನದ ಬಳಿ ಸುರಂಗವೊಂದರಲ್ಲಿ ಸಿಲುಕಿದ್ದ ಆರು ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿದೆ.

ರಾಷ್ಟ್ರೀಯ ವಿಕೋಪ ನಿರ್ವ ಹಣಾ ಪಡೆಯ ಎರಡು ತಂಡಗಳು, ಭಾರತೀಯ ಸೇನೆಯ ನಾಲ್ಕು ತುಕಡಿಗಳು, ನೌಕಾಪಡೆಯ ಮುಳುಗು ತಜ್ಞರು ರಕ್ಷಣಾ ಕಾರ್ಯದಲ್ಲಿ ತೊಡಗಿ ದ್ದಾರೆ. ರೈನಿ ಗ್ರಾಮದ ಬಳಿ ಸೇತುವೆ ಕೊಚ್ಚಿಹೋಗಿರುವ ಕಾರಣ, ಗಡಿಠಾಣೆ ಗಳಿಗೆ ಸಂಪರ್ಕ ಕಡಿತವಾಗಿದೆ.

ಅಧ್ಯಯನಕ್ಕೆ ಎರಡು ತಂಡ

ಜೋಶಿ ಮಠದ ಬಳಿ ಹಿಮನದಿ ಸ್ಫೋಟದಿಂದ ಸಂಭವಿಸಿದ ಪ್ರವಾಹದ ಬಗ್ಗೆ ಅಧ್ಯಯನ ನಡೆಸಲು ಎರಡು ತಂಡಗಳು ಸೋಮವಾರ ತೆರಳಲಿವೆ. ವಾಡಿಯಾ ಇನ್‌ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿಯ ಒಂದು ತಂಡ ಮತ್ತು ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಒಂದು ತಂಡವು ಅಧ್ಯಯನಕ್ಕೆ ತೆರಳಲಿವೆ.

2013ರಲ್ಲಿ ಉತ್ತರಾಖಂಡ ದಲ್ಲಿ ಮೇಘಸ್ಫೋಟದಿಂದ ಸಂಭವಿ ಸಿದ್ದ ಪ್ರವಾಹದ ಬಗ್ಗೆ ಈ ಎರಡು ತಂಡಗಳೇ ಅಧ್ಯಯನ ನಡೆಸಿದ್ದವು. 2013ರಲ್ಲಿ ಸಂಭವಿಸಿದ್ದ ಪ್ರವಾಹ ದಲ್ಲಿ 5,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.

ಇದು ಮಳೆಯ ಕಾಲವೂ ಅಲ್ಲ ಮತ್ತು ಹಿಮ ಕರಗುವಂತಹ ಕಾಲವೂ ಅಲ್ಲ. ಹೀಗಿದ್ದೂ ಹಿಮನದಿ ಸ್ಫೋಟ ಹೇಗಾಯಿತು ಹಾಗೂ ಪ್ರವಾಹ ಹೇಗೆ ತಲೆದೋರಿತು ಎಂಬುದರ ಬಗ್ಗೆ ಈ ತಂಡಗಳು ಅಧ್ಯಯನ ನಡೆಸಲಿವೆ. ‘ಹಿಮನದಿಯ ಸ್ಫೋಟ ಹೇಗೆ ಸಂಭವಿಸಿದೆ ಎಂಬುದರ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಹಿಮನದಿ ಮತ್ತು ನೀರ್ಗಲ್ಲುಗಳ ಬಗ್ಗೆ ಬೇರೆ-ಬೇರೆ ಆಯಾಮಗಳಿಂದ ಅಧ್ಯಯನ ನಡೆಸಬೇಕಿದೆ. ಅಧ್ಯಯನದ ನಂತರವಷ್ಟೇ ನಿಖರ ಮಾಹಿತಿ ನೀಡಬಹುದು' ಎಂದು ಅಧ್ಯಯನ ತಂಡದ ಸದಸ್ಯರು ಹೇಳಿದ್ದಾರೆ.

ಪ್ರವಾಹದ ಭೀತಿಯಿಲ್ಲ

ಋಷಿಗಂಗಾ ನದಿಯಲ್ಲಿ ಪ್ರವಾಹ ಉಂಟಾದ ನಂತರ ಧೌಲಿಗಂಗಾ ಮತ್ತು ಅಲಕಾನಂದ ನದಿಗಳಲ್ಲೂ ಪ್ರವಾಹ ತಲೆದೋರಿತ್ತು. ಹೀಗಾಗಿ ಈ ನದಿಗಳ ಹರಿವಿನ ಪ್ರದೇಶದಲ್ಲಿ ಪ್ರವಾಹದ ಎಚ್ಚರಿಕೆ ಘೋಷಿಸಲಾಗಿತ್ತು. ಉತ್ತರಪ್ರದೇಶ
ದಲ್ಲೂ ಪ್ರವಾಹದ ಎಚ್ಚರಿಕೆ ಘೋಷಿಸಲಾಗಿತ್ತು. ಆದರೆ, ಈಗ ಯಾವುದೇ ಭೀತಿಯಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.

ಹಿಮನದಿಯಿಂದ ಉಂಟಾಗಿದ್ದ ಪ್ರವಾಹದ ತೀವ್ರತೆ ಈಗ ಇಳಿಮುಖ ವಾಗಿದೆ. ಅಲ್ಲದೆ ಇನ್ನೂ ಎರಡು ದಿನ ಈ ಪ್ರದೇಶದಲ್ಲಿ ಮಳೆ ಆಗುವ ಸಾಧ್ಯತೆ ಇಲ್ಲ. ಹೀಗಾಗಿ ಪ್ರವಾಹ ತಲೆದೋರುವ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.

l ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಅವರು ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ

l ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರೆ ಮಾಡಿ, ನೆರವಿನ ಭರವಸೆ ನೀಡಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಮಾಹಿತಿ ಪಡೆದು ಕೊಂಡಿದ್ದಾರೆ

l ಪಂಜಾಬ್ ಮತ್ತು ದೆಹಲಿ ಸರ್ಕಾರಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ನೆರವು ನೀಡುವುದಾಗಿ ಹೇಳಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.