ADVERTISEMENT

ಅಮೃತಪಾಲ್ ಸಿಂಗ್, ಸಹಚರರಿಗಾಗಿ ಭಾರತ-ನೇಪಾಳ ಗಡಿಯಲ್ಲಿ ಹುಡುಕಾಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಮಾರ್ಚ್ 2023, 4:57 IST
Last Updated 22 ಮಾರ್ಚ್ 2023, 4:57 IST
ಅಮೃತಪಾಲ್ ಸಿಂಗ್
ಅಮೃತಪಾಲ್ ಸಿಂಗ್   

ರುದ್ರಪುರ (ಉತ್ತರಾಖಂಡ): ತೀವ್ರಗಾಮಿ ಬೋಧಕ, ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ಮತ್ತು ಅವರ ಸಹಚರರಿಗಾಗಿ ಉತ್ತರಾಖಂಡ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಭಾರತ-ನೇಪಾಳ ಗಡಿಯ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿರುವ ಪೊಲೀಸರು ಮಂಗಳವಾರ ಗುರುದ್ವಾರಗಳು, ಹೋಟೆಲ್‌ಗಳು ಮತ್ತು ಉಧಮ್ ಸಿಂಗ್ ನಗರ ಜಿಲ್ಲೆಯ ಹಲವಾರು ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದಾರೆ.

ಪಂಜಾಬ್ ಪೊಲೀಸರು ಸಿಂಗ್‌ ಮತ್ತು ಅವರ ಸಹಚರರ ವಿರುದ್ಧ ಶಿಸ್ತುಕ್ರಮವನ್ನು ಪ್ರಾರಂಭಿಸಿದ ಬೆನ್ನಲ್ಲೇ ಎಲ್ಲರೂ ನಾಪತ್ತೆಯಾಗಿದ್ದಾರೆ. ಗಡಿ ಜಿಲ್ಲೆಯಾದ್ಯಂತ ಈ ಅಪರಾಧಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕತ್ಯಾಲ್ ತಿಳಿಸಿದ್ದಾರೆ.

ADVERTISEMENT

ಸಿಂಗ್ ಮತ್ತು ಅವರ ಸಹಚರರು ದೇಶದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರ ಪಂಜಾಬ್ ಸಹವರ್ತಿಗಳಿಂದ ಬಂದ ಮಾಹಿತಿಯ ನಂತರ, ಪೊಲೀಸರು ಉತ್ತರಾಖಂಡದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು ಎಂದು ಅವರು ಹೇಳಿದರು.

ಗುಪ್ತಚರ ಸಂಸ್ಥೆಗಳೂ ಪರಿಸ್ಥಿತಿಯ ಮೇಲೆ ನಿಗಾ ಇಡುತ್ತಿವೆ. ಈ ಮೂಲಕ ನೇಪಾಳಕ್ಕೆ ಪರಾರಿಯಾಗದಂತೆ ಭಾರತ-ನೇಪಾಳ ಗಡಿಯಲ್ಲಿ ತೀವ್ರ ನಿಗಾ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಂಗ್ ಮತ್ತು ಆತನ ಸಹಾಯಕರು ಪಂಜಾಬ್‌ನಲ್ಲಿ ಬೇಕಾಗಿದ್ದಾರೆ ಎಂದು ನಿವಾಸಿಗಳಿಗೆ ತಿಳಿಸಲು ಪೊಲೀಸರು ಪೋಸ್ಟರ್‌ಗಳನ್ನು ಸಹ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.