ADVERTISEMENT

ಲಸಿಕೆ: 100 ಕೋಟಿ ಡೋಸ್‌ ಸಾಧನೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 21:01 IST
Last Updated 21 ಅಕ್ಟೋಬರ್ 2021, 21:01 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಕೋವಿಡ್‌–19 ಸಾಂಕ್ರಾಮಿಕದ ವಿರುದ್ಧದ ಲಸಿಕೆ ಅಭಿಯಾನದಲ್ಲಿ ಭಾರತವು ಮಹತ್ವದ ಮೈಲಿಗಲ್ಲೊಂದನ್ನು ಗುರುವಾರ ಸಾಧಿಸಿದೆ. ಲಸಿಕೆಯ 100 ಕೋಟಿಗೂ ಹೆಚ್ಚಿನ ಡೋಸ್‌ಗಳನ್ನು ಜನರಿಗೆ ನೀಡಲಾಗಿದೆ. ಇದೇ ಜನವರಿ 16ರಂದು ಲಸಿಕೆ ಅಭಿಯಾನ ಆರಂಭಗೊಂಡಿತ್ತು. ಒಂಬತ್ತು ತಿಂಗಳು ದಾಟಿದ ಬಳಿಕ ಲಸಿಕೆ ನೀಡಿಕೆಯು 100 ಕೋಟಿ ಡೋಸ್‌ಗಳನ್ನು ದಾಟಿದೆ.

18 ವರ್ಷಕ್ಕಿಂತ ಹೆಚ್ಚಿನ ವಯಸ್ಕ ಜನರನ್ನು ಮಾತ್ರ ಲಸಿಕೆಗೆ ಅರ್ಹರು ಎಂದು ಗುರುತಿಸಲಾಗಿದೆ. ಈ ವರ್ಗದ ಶೇ 75ರಷ್ಟು ಮಂದಿ ಕನಿಷ್ಠ ಒಂದು ಡೋಸ್‌ ಲಸಿಕೆ ಹಾಕಿಸಿಕೊಂಡಿದ್ಧಾರೆ. ಲಸಿಕೆಗೆ ಅರ್ಹರಾಗಿರುವ
ಶೇ 31ರಷ್ಟು ಜನರಿಗೆ ಲಸಿಕೆಯ ಎರಡೂ ಡೋಸ್‌ ಸಿಕ್ಕಿದೆ. ಒಟ್ಟು ಜನಸಂಖ್ಯೆಯ ಶೇ 21ರಷ್ಟು ಜನರಿಗೆ ಕೋವಿಡ್‌ನಿಂದ ಸಂಪೂರ್ಣ ರಕ್ಷಣೆ ಸಿಕ್ಕಿದೆ ಎಂದು ಅರ್ಥ.

ಗುರುವಾರ ಬೆಳಿಗ್ಗೆ 9.50ರ ಹೊತ್ತಿಗೆ ನೂರು ಕೋಟಿ ಡೋಸ್‌ಗಳ ಮೈಲುಗಲ್ಲನ್ನು ದೇಶವು ದಾಟಿತು. ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂದರ್ಭದಲ್ಲಿ ದೆಹಲಿಯ ಆರ್‌ಎಂಎಲ್‌ ಆಸ್ಪತ್ರೆಗೆ ಭೇಟಿ ನೀಡಿದರು. ಜಗತ್ತಿನ ಆರ್ಥಿಕತೆಯು ಮುಗ್ಗರಿಸುವಂತೆ ಮಾಡಿದ ಕೋವಿಡ್‌ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಆರೋಗ್ಯ ಕಾರ್ಯಕರ್ತರು ವಹಿಸಿದ ಪಾತ್ರ ನಿರ್ಣಾಯಕ ಎಂದು ಮೋದಿ ಕೊಂಡಾಡಿದರು.

ADVERTISEMENT

ನೂರು ಕೋಟಿ ಲಸಿಕೆ ಡೋಸ್‌ಗಳ ಬಲವಾದ ಸುರಕ್ಷಾ ಕವಚವನ್ನು ಭಾರತವು ಈಗ ಹೊಂದಿದೆ. ಇದು ಭಾರತದ ಪೌರರ ಸಾಧನೆ ಎಂದು ಪ್ರಧಾನಿ ಬಣ್ಣಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.