ವೈಷ್ಣೋದೇವಿ
ಜಮ್ಮು: ಜಮ್ಮುವಿನ ಕಾತ್ರಾದಲ್ಲಿರುವ ಪ್ರಸಿದ್ಧ ಯಾತ್ರಾಸ್ಥಳ ಮಾತಾ ವೈಷ್ಣೋದೇವಿಯಲ್ಲಿ ಕಳೆದ 8 ದಿನಗಳಿಂದ ಪ್ರತಿಕೂಲ ಹವಾಮಾನ ಆತಂಕ ಮುಂದುವರೆದಿದ್ದು ಈ ನಡುವೆ ಯಾತ್ರೆ ಇನ್ನೂ ಆರಂಭವಾಗುವ ಲಕ್ಷಣಗಳು ಕಂಡು ಬಂದಿಲ್ಲ.
ಇದಕ್ಕೆ ಕಾರಣ ರಿಯಾಸಿ ಜಿಲ್ಲೆಯಲ್ಲಿ ನಿನ್ನೆಯಿಂದ ಭಾರಿ ಮಳೆ ಹಾಗೂ ಅಲ್ಲಲ್ಲಿ ಭೂಕುಸಿತಗಳು ಉಂಟಾಗುತ್ತಿವೆ. ಇದರಿಂದ ಸದ್ಯ ವೈಷ್ಣೋದೇವಿ ಯಾತ್ರೆ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಸತತ 7 ದಿನಗಳಿಂದ ವೈಷ್ಣೋದೇವಿ ದೇವಾಲಯ ಬಂದ್ ಆಗಿದೆ ಎಂದು ಅಲ್ಲಿನ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.
ಕಳೆದ ಆಗಸ್ಟ್ 26 ರಂದು ಮಾತಾ ವೈಷ್ಣೋದೇವಿ ದೇವಾಲಯಕ್ಕೆ ತೆರಳುವ ಕಾತ್ರಾ ಮಾರ್ಗದಲ್ಲಿ ಮೇಘಸ್ಫೋಟದಿಂದಾಗಿ ಸಂಭವಿಸಿದ ಭೂ ಕುಸಿತದಲ್ಲಿ 34 ಯಾತ್ರಿಕರು ಮೃತಪಟ್ಟು 18ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಪ್ರತಿಕೂಲ ಹವಾಮಾನ ಹಾಗೂ ಭಾರಿ ಮಳೆಯಿಂದ ಯಾತ್ರಾರ್ಥಿಗಳಿಗೆ ಸದ್ಯ ಎಲ್ಲ ರೀತಿಯ ಮುಂಗಡ ಕಾಯ್ದಿರಿಸುವಿಕೆಯನ್ನು ರದ್ದುಗೊಳಿಸಿ ಎಂದು ಶ್ರೀ ಮಾತಾ ವೈಷ್ಣೋದೇವಿ ದೇವಾಲಯ ಮಂಡಳಿ (SMVDSB) ಯಾತ್ರಾರ್ಥಿಗಳಿಗೆ ಸೂಚನೆ ನೀಡಿದೆ.
ಮುಂಗಡ ಬುಕಿಂಗ್ ರದ್ದುಗೊಳಿಸುವ ಎಲ್ಲರಿಗೂ ಹಣವನ್ನು ನೂರಕ್ಕೆ ನೂರರಷ್ಟು ಮರುಪಾವತಿಯಾಗುವ ವ್ಯವಸ್ಥೆ ಮಾಡಿದ್ದೇವೆ ಎಂದು ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಸದ್ಯ ಯಾತ್ರೆಯನ್ನು ಮುಂದೂಡುವುದು ಸೂಕ್ತ ಎಂದು ಹೇಳಿದ್ದಾರೆ.
SMVDSB ಹವಾಮಾನ ಇಲಾಖೆ ಮುನ್ಸೂಚನೆಯನ್ನು ನಿರ್ಲಕ್ಷಿಸಿ, ಯಾತ್ರೆಗೆ ಅವಕಾಶ ನೀಡಿತ್ತು. ಇದರಿಂದ ಹೆಚ್ಚಿನ ಸಾವು ನೋವುಗಳು ಸಂಭವಿಸಿದವು ಎಂಬುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.