ADVERTISEMENT

ವಂದೇ ಭಾರತ್ ಸ್ಲೀಪರ್ ರೈಲಿಗೆ ಶೀಘ್ರ ಚಾಲನೆ: ಸ್ನಾನಗೃಹದಲ್ಲಿ ಬಿಸಿನೀರಿನ ಸೌಲಭ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜನವರಿ 2026, 6:01 IST
Last Updated 3 ಜನವರಿ 2026, 6:01 IST
<div class="paragraphs"><p>ವಂದೇ ಭಾರತ್</p></div>

ವಂದೇ ಭಾರತ್

   

ಕೈನೆಟ್ ರೈಲ್ವೆ ಸೊಲೂಷನ್ಸ್‌ ಚಿತ್ರ

ಬಡ ಹಾಗೂ ಮಧ್ಯಮ ವರ್ಗದ ಜನರು ನೆಚ್ಚಿಕೊಂಡಿರುವ ರೈಲಿಗೆ ವಂದೇ ಭಾರತ್ ಮೂಲಕ ಐಷಾರಾಮಿ ಸ್ಪರ್ಶ ನೀಡಲಾಗಿದೆ. ವೇಗ, ಸೌಲಭ್ಯ, ಆರಾಮಕ್ಕಾಗಿಯೇ ಜನಪ್ರಿಯವಾಗಿರುವ ವಂದೇ ಭಾರತ್ ಇದೀಗ ಸ್ಲೀಪರ್‌ ಆವೃತ್ತಿ ಮೂಲಕವೂ ಹಳಿಗಿಳಿಯಲು ಸಜ್ಜಾಗಿದೆ.

ADVERTISEMENT

ಪ್ರಯಾಣಿಕರ ಅನುಕೂಲ ಹಾಗೂ ವಿಶ್ರಾಂತಿಗೆ ಆದ್ಯತೆ ನೀಡುವ ಸಲುವಾಗಿ ಐಸಿಎಫ್ (ಇಂಟಿಗ್ರಲ್ ಕೋಚ್ ಫ್ಯಾಕ್ಟರಿ) ತಂತ್ರಜ್ಞಾನ ಬಳಸಿಕೊಂಡು ಬಿಇಎಂಎಲ್ (ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್) ಈ ವಂದೇ ಭಾರತ್ ಸ್ಲೀಪರ್ ರೈಲನ್ನು ಪರಿಚಯಿಸಿದೆ.

ವಂದೇ ಭಾರತ್ ಸ್ಲೀಪರ್ ಕೋಚ್‌ನ ಮೊದಲ ರೈಲಿಗೆ ಪ್ರಧಾನಿ ನರೇಂದ್ರ ಮೋದಿಯವರು ಜನವರಿಯಲ್ಲಿ ಹಸಿರು ನಿಶಾನೆ ತೋರಲಿದ್ದಾರೆ. ಈ ರೈಲು ಗುವಾಹಟಿ-ಹೌರಾ ಮಾರ್ಗದಲ್ಲಿ ಸಂಚರಿಸಲಿದೆ ಎಂದು ಮೂಲಗಳು ಹೇಳಿವೆ.

ಗುವಾಹಟಿ-ಹೌರಾ ಮಾರ್ಗದಲ್ಲಿ ಸಂಚರಿಸುವ ರೈಲು ಅಸ್ಸಾಂನ ಗುವಾಹಟಿ (ಕಾಮಾಖ್ಯ) ಮತ್ತು ಪಶ್ಚಿಮ ಬಂಗಾಳದ ಹೌರಾದ ನಡುವೆ ರಾತ್ರಿ ವೇಲೆ ಸುಮಾರು 1,200–1,500 ಕಿ.ಮೀ. ದೂರ ಕ್ರಮಿಸಲಿದೆ. ಇದು ಅಸ್ಸಾಂ, ಉತ್ತರ ಬಂಗಾಳ ಮತ್ತು ಪಶ್ಚಿಮ ಬಂಗಾಳದ ಅನೇಕ ಜಲ್ಲೆಗಳನ್ನು ಸಂದಿಸಲಿದೆ.

ಈಗಾಗಲೇ ರೈಲಿನ ಪರೀಕ್ಷೆ ಯಶಸ್ವಿಯಾಗಿದೆ. ಎರಡು ಸ್ಲೀಪರ್ ರೈಲುಗಳು ಈಗಾಗಲೇ ಸಂಚಾರಕ್ಕೆ ಸಿದ್ಧಗೊಂಡಿವೆ ಹಾಗೂ 2026 ರ ಮಧ್ಯಭಾಗದ ವೇಳೆಗೆ 8 ಹೊಸ ರೈಲುಗಳನ್ನು ಬಿಡುವ ಯೋಜನೆ ರೂಪಿಸಲಾಗಿದೆ. ವರ್ಷಾಂತ್ಯದ ವೇಳೆಗೆ ಸುಮಾರು 12 ರೈಲುಗಳು ಸಂಚರಿಸುವ ಗುರಿ ಹೊಂದಲಾಗಿದೆ.

ವಂದೇ ಭಾರತ್ ಸ್ಲೀಪರ್ ರೈಲಿನ ವೈಶಿಷ್ಟ್ಯಗಳು

ಗಂಟೆಗೆ ಗರಿಷ್ಠ 180 ಕಿ.ಮೀ ವೇಗದಲ್ಲಿ ಸಂಚರಿಸಲಿರುವ ಈ ರೈಲು, 16 ಹವಾನಿಯಂತ್ರಿತ ಬೋಗಿಗಳನ್ನು ಹೊಂದಿದೆ. ವಿವಿಧ ವರ್ಗಗಳಲ್ಲಿ 823 ಪ್ರಯಾಣಿಕರಿಗೆ ಅವಕಾಶ ಕಲ್ಪಿಸುತ್ತದೆ. 11 ಹವಾನಿಯಂತ್ರಿತ ಬೋಗಿಗಳಿವೆ. ಇದರಲ್ಲಿ 3-ಟೈರ್, 4 ಎಸಿ 2-ಟೈರ್ ಮತ್ತು 1 ಫಸ್ಟ್ ಕ್ಲಾಸ್ ಬೋಗಿಗಳನ್ನು ಒಳಗೊಂಡಿದೆ.

ಫಸ್ಟ್ ಕ್ಲಾಸ್ ಕೋಚ್‌ನಲ್ಲಿ ಸ್ನಾನಕ್ಕೆ ಬಿಸಿ ನೀರಿನ ಸೌಲಭ್ಯವೂ ಇದೆ. ಆಧುನಿಕ ವೈಶಿಷ್ಟ್ಯದ ಐಷಾರಾಮಿ ಸೌಲಭ್ಯಗಳನ್ನು ನೀಡಲಿದೆ. ಪ್ರಯಾಣಿಕರಿಗೆ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ಗಳು, ಪ್ರತ್ಯೇಕ ಓದುವ ಲೈಟ್‌ಗಳನ್ನು ನೀಡಲಿದೆ. ಸಿಸಿಟಿವಿ ಕ್ಯಾಮೆರಾ, ಡಿಸ್‌ಪ್ಲೇ ಪ್ಯಾನೆಲ್‌ಗಳನ್ನು ಸಹ ಈ ರೈಲು ಹೊಂದಿದೆ.

ಮಧ್ಯಮ ವರ್ಗದ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ದರಗಳನ್ನು ನಿಗದಿಪಡಿಸಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. 3AC ದರ ಸುಮಾರು ₹2,300, 2AC ದರ ₹3,000, ಮತ್ತು 1AC ದರ ₹3,600 ಹೊಂದಿದೆ. ಇದರ ಜೊತೆಗೆ ಊಟದ ವ್ಯವಸ್ಥೆ ಕೂಡ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.