ADVERTISEMENT

ವರವರ ರಾವ್‌ ಮತ್ತೆ ಬಂಧನ

ಮೋದಿ ಹತ್ಯೆಗೆ ಸಂಚು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2018, 19:51 IST
Last Updated 17 ನವೆಂಬರ್ 2018, 19:51 IST
   

ಹೈದರಾಬಾದ್‌: ತೆಲುಗಿನ ಕ್ರಾಂತಿಕಾರಿ ಕವಿ ಪಿ. ವರವರ ರಾವ್‌ ಅವರನ್ನು ಮಹಾರಾಷ್ಟ್ರ ಪೊಲೀಸರು ಶನಿವಾರ ರಾತ್ರಿ ಮತ್ತೆ ಬಂಧಿಸಿದ್ದಾರೆ.

ಭೀಮಾ–ಕೋರೆಗಾಂವ್‌ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಮತ್ತು ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ ಆರೋಪದಲ್ಲಿ ಅವರನ್ನು ಗೃಹ ಬಂಧನಕ್ಕೆ ಒಪ್ಪಿಸಲಾಗಿತ್ತು.

ಅ.26ರಂದು ಅವರ ಗೃಹಬಂಧನ ಅವಧಿ ಕೊನೆಗೊಂಡಿತ್ತು. ಅನಾರೋಗ್ಯದಿಂದಾಗಿ ಅವರನ್ನು ಪುಣೆಗೆ ಕರೆದೊಯ್ಯಲು ಸಾಧ್ಯವಿಲ್ಲ ಎಂದು ಹೈದರಾಬಾದ್‌ ನ್ಯಾಯಾಲಯ ಗೃಹಬಂಧನ ಅವಧಿಯನ್ನು ಮೂರು ವಾರ ವಿಸ್ತರಿಸಿತ್ತು.

ADVERTISEMENT

ಶುಕ್ರವಾರವೇ ಹೈದರಾಬಾದ್‌ಗೆ ಬಂದಿಳಿದಿದ್ದ ಪುಣೆಯ ಪೊಲೀಸರ ವಿಶೇಷ ತಂಡವೊಂದು ಗಾಂಧಿನಗರದ ಅಪಾರ್ಟ್‌ಮೆಂಟ್‌ನಿಂದ ವರವರ ರಾವ್‌ ಅವರನ್ನು ಬಂಧಿಸಿತು. ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಅವರನ್ನು ಪೊಲೀಸರು ಪುಣೆಗೆ ಕರೆದೊಯ್ಯಲಿದ್ದಾರೆ.

ಉದ್ವಿಗ್ನ ಸ್ಥಿತಿ: ಬಂಧನ ವಿಷಯ ತಿಳಿಯುತ್ತಿದ್ದಂತೆಯೇ ರಾವ್‌ ನಿವಾಸದ ಎದುರು ಜಮಾಯಿಸಿದ ಬೆಂಬಲಿಗರು, ಸಾಮಾಜಿಕ ಮತ್ತು ಮಾನವ ಹಕ್ಕುಗಳ ಹೋರಾಟಗಾರರು ಪೊಲೀಸರ ವಿರುದ್ಧ ಘೋಷಣೆ ಕೂಗಿದರು.

ರಾವ್ ಬಂಧನ ಅಕ್ರಮ ಮತ್ತು ಸಂವಿಧಾನ ವಿರೋಧಿ ಎಂದು ಅವರು ಆರೋಪಿಸಿದರು. ರಾವ್‌ ಪತ್ನಿ ಹೇಮಲತಾ ಮತ್ತು ಕುಟುಂಬ ಸದಸ್ಯರು ಕಣ್ಣೀರು ಸುರಿಸಿದರು.

ಹೋರಾಟಗಾರರ ಮನೆ ಮೇಲೆ ಆಗಸ್ಟ್‌ 28ರಂದು ದಾಳಿ ನಡೆಸಿದ್ದ ಮಹಾರಾಷ್ಟ್ರ ಪೊಲೀಸರು, ವರವರ ರಾವ್‌, ಸುಧಾ ಭಾರದ್ವಾಜ್, ಗೌತಮ್ ನವಲಖಾ, ವರ್ನಾನ್ ಗೋನ್ಸಾಲ್ವೆಸ್, ಅರುಣ್ ಫೆರೇರಾ ಅವರನ್ನು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.