ADVERTISEMENT

ಸಾವರ್ಕರ್ ವಿಮಾನ ನಿಲ್ದಾಣಕ್ಕೆ ಹೊಸ ತಂತ್ರಜ್ಞಾನ

ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ವಿಮಾನಗಳ ಕಾರ್ಯಾಚರಣೆಗೆ ನೆರವು

ಪಿಟಿಐ
Published 27 ಜನವರಿ 2024, 14:29 IST
Last Updated 27 ಜನವರಿ 2024, 14:29 IST
-
-   

ಪೋರ್ಟ್‌ಬ್ಲೇರ್: ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ವಿಮಾನವನ್ನು ಸುಲಭ ಹಾಗೂ ಸುರಕ್ಷಿತವಾಗಿ ಭೂಸ್ಪರ್ಶ ಮಾಡಲು ನೆರವಾಗುವ ಅತ್ಯಾಧುನಿಕ ಇನ್‌ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್‌ (ಐಎಲ್‌ಎಸ್‌) ಮತ್ತು ರನ್‌ವೇ ಲೈಟಿಂಗ್ ಸಿಸ್ಟಮ್ ಅನ್ನು (ಆರ್‌ಎಲ್ಎಸ್) ಇಲ್ಲಿನ ವೀರ ಸಾವರ್ಕರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಳವಡಿಸಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 

ವಿಮಾನ ನಿಲ್ದಾಣದಲ್ಲಿ ಫೆಬ್ರುವರಿ 15ರ ಒಳಗಾಗಿ ಐಎಲ್ಎಸ್ ವ್ಯವಸ್ಥೆ ಅಳವಡಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನೌಕಾಪಡೆಯೊಂದಿಗೆ ನಿಕಟ ಸಹಕಾರ ಸಾಧಿಸಲಾಗಿದೆ ಎಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ತಿಳಿಸಿದೆ. ಮಾರ್ಚ್ ಅಂತ್ಯದಲ್ಲಿ ಆರ್‌ಎಲ್ಎಸ್ ಅನ್ನು ಸ್ಥಾಪಿಸಲು ಭಾರತೀಯ ನೌಕಾಪಡೆ ಯೋಜಿಸಿದೆ. 

ಈ ಕುರಿತು ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ವಿಮಾನ ನಿಲ್ದಾಣದ ನಿರ್ದೇಶಕ ದೇವೇಂದರ್ ಯಾದವ್, ‘ಜನವರಿ 19ರಿಂದ ಡಾಪ್ಲರ್ ವೆರಿ ಹೈ ಫ್ರೀಕ್ವೆನ್ಸಿ ಒಮ್ನಿ ರೇಂಜ್ (ಡಿವಿಒಆರ್) ಕಾರ್ಯನಿರ್ವಹಿಸುತ್ತಿದೆ. ಸಿಗ್ನಲ್‌ಗಳನ್ನು ಬಳಸಿಕೊಂಡು ವಿಮಾನದ ಸ್ಥಿತಿ, ದಿಕ್ಕು ಮತ್ತು ಸ್ಥಳವನ್ನು ನೆಲೆಗೊಳಿಸಲು ಈ ವ್ಯವಸ್ಥೆ ನೆರವಾಗಲಿದೆ’ ಎಂದಿದ್ದಾರೆ. 

ADVERTISEMENT

ವಿಮಾನ ನಿಲ್ದಾಣದಲ್ಲಿ ಐಎಲ್ಎಸ್ ಅಳವಡಿಕೆ ಮುಕ್ತಾಯವಾದ ಬಳಿಕ ಏಪ್ರಿಲ್–ಮೇ ತಿಂಗಳ ವೇಳೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಮತ್ತು ಭಾರತೀಯ ನೌಕಾಪಡೆಯ ಅನುಮೋದನೆ ಪಡೆಯಲಾಗುವುದು. ಆ ನಂತರ ಸಾವರ್ಕರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಅತ್ಯಾಧುನಿಕ ಸಲಕರಣೆಗಳೊಂದಿಗೆ ರಾತ್ರಿ ಮತ್ತು ಹವಾಮಾನ ವೈಪರಿತ್ಯ ಸಂದರ್ಭದಲ್ಲೂ ವಿಮಾನಗಳ ಸೇವೆಗೆ ಸಜ್ಜಾಗಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.