ADVERTISEMENT

ವಾಹನಗಳ ಗುಜರಿ ನೀತಿಯಿಂದ ಲಾಭವೇ ಹೆಚ್ಚು: ಗಡ್ಕರಿ ಪ್ರತಿಪಾದನೆ

ಪಿಟಿಐ
Published 18 ಮಾರ್ಚ್ 2021, 21:27 IST
Last Updated 18 ಮಾರ್ಚ್ 2021, 21:27 IST
ನಿತಿನ್‌ ಗಡ್ಕರಿ
ನಿತಿನ್‌ ಗಡ್ಕರಿ   

ನವದೆಹಲಿ: ‘ವಾಹನಗಳ ಗುಜರಿ ನೀತಿ’ಯಡಿ ಹಳೆಯ ವಾಹನಗಳನ್ನು ಕೈಬಿಟ್ಟು ಹೊಸ ವಾಹನ ಖರೀದಿಸಲು ಮುಂದಾದಲ್ಲಿ ಶೇ 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಇದು, ಗ್ರಾಹಕರು –ಮಾರಾಟಗಾರರು ಇಬ್ಬರಿಗೂ ಅನುಕೂಲಕರವಾದ ನೀತಿಯಾಗಿದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ರಾಜ್ಯಸಭೆಯಲ್ಲಿ ತಿಳಿಸಿದರು.

ಸ್ವಯಂಪ್ರೇರಿತವಾಗಿ ಹಳೆಯ ವಾಹನಗಳನ್ನು ಕೈಬಿಡಲು ಉತ್ತೇಜನ ನೀಡುವ ನೀತಿಯನ್ನು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. 15 ವರ್ಷ ಹಳೆಯ ವಾಣಿಜ್ಯ ಬಳಕೆಯ ವಾಹನಗಳು, 20 ವರ್ಷ ಹಳೆಯದಾದ ವೈಯಕ್ತಿಕ ಬಳಕೆ ವಾಹನಗಳ ಸುಸ್ಥಿತಿ ದೃಢಪಡಿಸಲು ಪರೀಕ್ಷೆ ಕಡ್ಡಾಯವಾಗಿದೆ ಎಂದು ಹೇಳಿದರು.

ಹಳೆಯ ವಾಹನ ಕೈಬಿಟ್ಟು ಹೊಸ ವಾಹನ ಖರೀದಿಸುವ ಗ್ರಾಹಕರಿಗೆ ಶೇ 5ರಷ್ಟು ರಿಯಾಯಿತಿ ನೀಡಲು ವಾಹನ ತಯಾರಕರಿಗೆ ಸೂಚಿಸಲಾಗಿದೆ. ಈ ನೀತಿ ಜಾರಿಯಿಂದಾಗಿ ಜಿಎಸ್‌ಟಿ ಸಂಗ್ರಹ ಮೊತ್ತ ₹ 40,000 ಕೋಟಿ ಮೀರುವ ಅಂದಾಜು ಇದೆ. ಆತ್ಮನಿರ್ಭರ ಭಾರತ ಅಭಿಯಾನಕ್ಕೂ ಈ ನೀತಿಯು ಚೇತರಿಕೆ ನೀಡಲಿದೆ ಎಂದು ತಿಳಿಸಿದರು.

ADVERTISEMENT

ಸುಸ್ಥಿತಿಯಲ್ಲಿಲ್ಲದ ವಾಹನಗಳನ್ನು ನೋಂದಾಯಿತ ಗುಜರಿಗೆ ಹಾಕಿ, ಪ್ರಮಾಣಪತ್ರ ಪಡೆಯಬಹುದು. ಹೊಸ ವಾಹನಗಳ ಎಕ್ಸ್‌ ಷೋ ರೂಂ ದರದಲ್ಲಿ ಶೇ 4 ರಿಂದ 6ರಷ್ಟು ರಿಯಾಯಿತಿ ಸಿಗಲಿದೆ. ಹೆಚ್ಚುವರಿಯಾಗಿ ನೋಂದಣಿ ಶುಲ್ಕದಿಂದಲೂ ರಿಯಾಯಿತಿ ನೀಡಬಹುದಾಗಿದೆ ಎಂದು ತಿಳಿಸಿದರು.

ನೀತಿ ಜಾರಿಗೆ ಪೂರಕವಾಗಿ ದೇಶದಾದ್ಯಂತ ನೋಂದಾಯಿತ ಗುಜರಿ ಕೇಂದ್ರಗಳನ್ನು ಸ್ಥಾಪಿಸಲು ಸಚಿವಾಲಯ ಒತ್ತು ನೀಡುತ್ತಿದೆ. ಸಾರ್ವಜನಿಕರು, ಖಾಸಗಿ ಭಾಗಿದಾರರಿಗೂ ಕೇಂದ್ರ ಸ್ಥಾಪನೆಗೆ ಉತ್ತೇಜನ ನೀಡಲಾಗುವುದು. ಗುಜರಾತ್‌ನ ಅಳಂಗ್ ಸೇರಿದಂತೆ ದೇಶದ ವಿವಿಧೆಡೆ ಸಮಗ್ರ ಸೌಲಭ್ಯದ ಕೇಂಧ್ರ ಸ್ಥಾಪಿಸಲು ಚಿಂತನೆ ನಡೆದಿದೆ. ಇಲ್ಲಿ ವಿವಿಧ ತಂತ್ರಜ್ಞಾನ ಬಳಸಿ ಸುಸ್ಥಿತಿಯಲ್ಲಿ ಇಲ್ಲದ ವಾಹನಗಳನ್ನು ನಿರುಪಯೋಗಗೊಳಿಸಲಾಗುವುದು ಎಂದು ವಿವರಿಸಿದರು.

ಏಕಗವಾಕ್ಷಿ ವ್ಯವಸ್ಥೆಯಡಿ ಈ ಉದ್ದೇಶಕ್ಕಾಗಿ ವಾಹನಗಳ ನೋಂದಣಿ ಮಾಡಬಹುದಾಗಿದೆ. ಜಾರಿಯಲ್ಲಿ ಇರುವ ಎಲ್ಲ ಕಾನೂನುಗಳು, ಪರಿಸರ ಮತ್ತು ವಾಯುಮಾಲಿನ್ಯ ಸಂಬಂಧಿತ ನಿಯಮಗಳಿಗೆ ಬದ್ದರಾಗಿರಬೇಕಾಗುತ್ತದೆ ಎಂದು ತಿಳಿಸಿದರು.

ಜೊತೆಗೆ ಅಗತ್ಯವಿರುವಷ್ಟು ವಾಹನಗಳ ನಿಲುಗಡೆ ಸೌಲಭ್ಯ, ನೀರು, ವಾಯು ಮತ್ತು ಶಬ್ದ ಮಾಲಿನ್ಯ ನಿವಾರಕ ಪರಿಕರಗಳು,ತ್ಯಾಜ್ಯ ವಿಲೇವಾರಿಗೆ ಅಗತ್ಯ ಸೌಲಭ್ಯಗಳನ್ನು ಒಳಗೊಂಡಿರಬೇಕು. ಅಂತೆಯೇ, ಪಿಪಿಪಿ ಮಾದರಿಯಡಿ ರಾಜ್ಯ ಸರ್ಕಾರಗಳು, ಖಾಸಗಿ ವಲಯ ಮತ್ತು ವಾಹನ ಉತ್ಪಾದಕ ಕಂಪನಿಗಳ ಸಹಯೋಗದಲ್ಲಿ ಸಚಿವಾಲಯವು ಸ್ವಯಂಚಾಲಿತ ಫಿಟ್‌ನೆಸ್‌ ಸೆಂಟರ್‌ಗಳನ್ನು ಸ್ಥಾಪಿಸುವ ಚಿಂತನೆಯನ್ನು ಹೊಂದಿದೆ ಎಂದು ವಿವರಿಸಿದರು.

ಹಳೆಯ ವಾಹನಗಳನ್ನು ಕೈಬಿಡುವ ನೀತಿಯು ಭಾರತೀಯ ಆಟೊಮೊಬೈಲ್‌ ಉದ್ಯಮಕ್ಕೆ ಶೇ 30ರಷ್ಟು ಚೇತರಿಕೆ ನೀಡಲಿದ್ದು, ಬರುವ ವರ್ಷಗಳಲ್ಲಿ ವಹಿವಾಟು ಮೊತ್ತವನ್ನು ₹ 10 ಲಕ್ಷ ಕೋಟಿವರೆಗೂ ಹೆಚ್ಚಿಸುವ ಅಂದಾಜು ಇದೆ. ಸದ್ಯ, ಈ ಉದ್ಯಮದ ವಾರ್ಷಿಕ ವಹಿವಾಟು ₹ 4.5 ಲಕ್ಷ ಕೋಟಿಗಳಾಗಿದೆ ಎಂದು ಗಡ್ಕರಿ ತಿಳಿಸಿದರು.

ವಾಹನಗಳ ಬೇಡಿಕೆಯೂ ಹೆಚ್ಚುವ ಕಾರಣ ಆದಾಯವೂ ಏರಲಿದೆ. ಆರಂಭಿಕವಾಗಿ ಪರಿಸರ ಮಾಲಿನ್ಯಕ್ಕೆ ಕಾರಣವಾಗಿರುವ ಸುಮಾರು 1 ಕೋಟಿ ವಾಹನಗಳನ್ನು ಬಳಕೆಯಿಂದ ಕೈಬಿಡುವ ಸಾಧ್ಯತೆ ಇದೆ. ಇವುಗಳಲ್ಲಿ 51 ಲಕ್ಷದಷ್ಟು 20 ವರ್ಷ ಹಳೆಯದಾದ ಹಗುರ ಮೋಟಾರು ವಾಹನಗಳಾಗಿದ್ದರೆ, 34 ಲಕ್ಷದಷ್ಟು 15 ವರ್ಷ ಹಳೆಯದಾದ ಭಾರಿ ವಾಹನಗಳಾಗಿವೆ. ಅಲ್ಲದೆ, ಸದ್ಯ ಸುಸ್ಥಿತಿ ಪ್ರಮಾಣಪತ್ರ ಇರುವ 15 ವರ್ಷ ಮೀರಿದ ಮಧ್ಯಮ ವರ್ಗದ ವಾಹನಗಳು ಸೇರುವ ನಿರೀಕ್ಷೆಯಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.