ADVERTISEMENT

ಮಹಾರಾಷ್ಟ್ರದಲ್ಲಿ ಬಹಳ ಗೊಂದಲಮಯ ಸನ್ನಿವೇಶ ಸೃಷ್ಟಿ: ಸುಪ್ರೀಂ ಕೋರ್ಟ್‌

ಪಿಟಿಐ
Published 11 ಜನವರಿ 2022, 13:56 IST
Last Updated 11 ಜನವರಿ 2022, 13:56 IST
ಸುಪ್ರೀಂಕೋರ್ಟ್‌
ಸುಪ್ರೀಂಕೋರ್ಟ್‌   

ನವದೆಹಲಿ: ‘ಮಹಾರಾಷ್ಟ್ರದಲ್ಲಿ ತುಂಬಾ ಗೊಂದಲದ ಸನ್ನಿವೇಶ ಸೃಷ್ಟಿಯಾಗಿದೆ. ಇಲ್ಲಿ ಈ ಹಿಂದೆ ‍ಪೊಲೀಸ್‌ ತಂಡವನ್ನು ಮುನ್ನೆಡೆಸುತ್ತಿದ್ದ ಮಾಜಿ ಪೊಲೀಸ್ ಆಯುಕ್ತ ಪರಮ್‌ಬೀರ್ ಸಿಂಗ್ ಅವರಿಗೆ ತನ್ನದೇ ಪಡೆ ಮೇಲೆ ಭರವಸೆಯಿಲ್ಲ. ರಾಜ್ಯ ಸರ್ಕಾರಕ್ಕೇ ಸಿಬಿಐ ಮೇಲೆ ನಂಬಿಕೆಯಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ರಾಜ್ಯ ಪೊಲೀಸರು, ಇಲಾಖಾ ಸಂಬಂಧಿತ ಪ್ರಕರಣಗಳಲ್ಲಿ ತಮ್ಮನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಪರಮ್‌ಬೀರ್‌ ಸಿಂಗ್‌ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್‌.ಕೆ.ಕೌಲ್‌, ಎಂ.ಎಂ.ಸುಂದರೇಶ್‌ ಅವರನ್ನೊಳಗೊಂಡ ಪೀಠವು, ಸಿಂಗ್‌ಗೆ ಬಂಧನದಿಂದ ರಕ್ಷಣೆಯನ್ನು ನೀಡಲು ನಿರಾಕರಿಸಿದೆ.

‘ನೀವು ಇಷ್ಟು ದಿನ ನೇತೃತ್ವ ವಹಿಸಿದ್ದ ಪೊಲೀಸ್‌ ತಂಡದ ಮೇಲೆ ನಿಮಗೆ ನಂಬಿಕೆಯಿಲ್ಲ. ರಾಜ್ಯ ಸರ್ಕಾರಕ್ಕೆ ಸಿಬಿಐ ಮೇಲೆ ವಿಶ್ವಾಸವಿಲ್ಲ. ರಾಜ್ಯದಲ್ಲಿ ಈ ರೀತಿಯ ಸನ್ನಿವೇಶ ಸೃಷ್ಟಿಯಾಗಿದೆ. ಇದನ್ನು ಶಾಂತಿಯುತವಾಗಿ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯ ಸರ್ಕಾರ ಈ ಸಂಬಂಧ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿಯನ್ನೂ ಸಲ್ಲಿಸಿತ್ತು. ಆದರೆ, ಪರಾಜಿತಗೊಂಡಿತು. ಈಗ ಈ ವಿಷಯ ಸುಪ್ರೀಂಕೋರ್ಟ್‌ ಬಳಿಯಿದೆ. ನಾವು ಈಗಾಗಲೇ ಸಿಂಗ್‌ಗೆ ಬಂಧನದಿಂದ ಸಾಕಷ್ಟು ರಕ್ಷಣೆ ನೀಡಿದ್ದೇವೆ. ಇದನ್ನು ಇನ್ನಷ್ಟು ವಿಸ್ತರಿಸಲು ಸಾಧ್ಯವಿಲ್ಲ’ ಎಂದು ಪೀಠ ಅಭ್ರಿಪ್ರಾಯಪಟ್ಟಿದೆ.

ADVERTISEMENT

ಇನ್ನೊಂದೆಡೆ ಈ ಪ್ರಕರಣದ ತನಿಖೆಗೆ ತೊಂದರೆಯಾಗುವಂತಹ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಳ್ಳುವ ಸಾಧ್ಯತೆಯಿದೆ ಎಂದುಸಿಬಿಐಯು ಪರ ಹಾಜರಿದ್ದ ಸಾಲಿಟರ್‌ ಜನರಲ್ ತುಷಾರ್‌ ಮೆಹ್ತಾ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

‘ಪರಿಸ್ಥಿತಿ ಸರಿಯಾಗಿದ್ದಾಗ ಎಲ್ಲರೂ ಹೊಂದಿಕೊಂಡು ಹೋಗುತ್ತಾರೆ. ಆದರೆ, ಅದು ಸರಿಯಾಗಿ ನಡೆಯದಿದ್ದಾಗ ಎಲ್ಲರೂ ಪರಸ್ಪರರ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ’ ಎಂದು ಹೇಳಿರುವ ಪೀಠವು ಅರ್ಜಿ ವಿಚಾರಣೆಯನ್ನು ಫೆಬ್ರುವರಿ22 ಕ್ಕೆ ಮುಂದೂಡಿದೆ.

‘ಮಾಜಿ ಗೃಹ ಸಚಿವ ಅನಿಲ್‌ ದೇಶಮುಖ್ ವಿರುದ್ಧದ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ಸಿಬಿಐನಿಂದ ವಿಶೇಷ ತನಿಖಾ ದಳಕ್ಕೆ ಹಸ್ತಾಂತರಿಸುವಂತೆ ಕೋರಿ ಮಹಾರಾಷ್ಟ್ರ ಸರ್ಕಾರವು ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿದೆ’ ಎಂದು ಸರ್ಕಾರ ಪರ ಹಿರಿಯ ವಕೀಲ ಡೆರಿಯಸ್‌ ಕಂಬಟ್ಟ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.