ADVERTISEMENT

ನೌಕಾಪಡೆಗೆ ನೂತನ ಸಾರಥಿ ಕರಂಬೀರ್‌ ಸಿಂಗ್‌ 

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2019, 18:11 IST
Last Updated 23 ಮಾರ್ಚ್ 2019, 18:11 IST
   

ನವದೆಹಲಿ: ವೈಸ್‌ ಅಡ್ಮಿರಲ್‌ ಕರಮ್‌ಬೀರ್‌ ಸಿಂಗ್‌ ನೌಕಾಪಡೆಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಪ್ರಸ್ತುತ, ನೌಕಾಪಡೆ ಮುಖ್ಯಸ್ಥರಾಗಿರುವ ಅಡ್ಮಿರಲ್‌ ಸುನೀಲ್‌ ಲಾಂಬಾ ಮೇ 30ರಂದು ನಿವೃತ್ತರಾಗಲಿದ್ದಾರೆ. 31ರಂದು ವರ್ಮಾ ಅಧಿಕಾರ ಸ್ವೀಕರಿಸಲಿದ್ದಾರೆ.

ಹಿರಿತನವನ್ನು ಪರಿಗಣಿಸಿದ್ದರೆ, ಅಂಡಮಾನ್‌ ಮತ್ತು ನಿಕೋಬಾರ್‌ನ ಚೀಫ್‌ ಕಮಾಂಡರ್‌ ಆಗಿರುವ ವೈಸ್‌ ಅಡ್ಮಿರಲ್‌ ವಿಮಲ್‌ ವರ್ಮಾ ನೌಕಾಪಡೆಯ ಉನ್ನತ ಹುದ್ದೆ ಅಲಂಕರಿಸಬೇಕಿತ್ತು. ಸಿಂಗ್‌ ಅವರಿಗಿಂತ ವರ್ಮಾ ಸೇವಾ ಹಿರಿತನ ಹೊಂದಿದ್ದಾರೆ.

ADVERTISEMENT

ಸಿಂಗ್‌ ಅವರು, ವಿಶಾಖಪಟ್ಟಣದಲ್ಲಿರುವ ಪೂರ್ವ ನೌಕಾ ಕಮಾಂಡ್‌ನ ಮುಖ್ಯ ಕಮಾಂಡಿಂಗ್‌ ಫ್ಲಾಗ್‌ ಅಧಿಕಾರಿಯಾಗಿ ಈಗ ಕಾರ್ಯನಿರ್ವಹಿಸುತ್ತಿದ್ದಾರೆ.

‘ನೌಕಾಪಡೆಯಲ್ಲಿ ಮುಖ್ಯಸ್ಥ ಹುದ್ದೆಗೆ ಏರಿದ ಮೊದಲ ಹೆಲಿಕಾಪ್ಟರ್‌ ಪೈಲಟ್‌ ಕರಮ್‌ಬೀರ್‌ ಸಿಂಗ್‌’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

37 ವರ್ಷಗಳ ವೃತ್ತಿಜೀವನದಲ್ಲಿ ನಾಲ್ಕು ಹಡಗುಗಳ ಮುಂದಾಳತ್ವವನ್ನು ಅವರು ವಹಿಸಿದ್ದರು. ಭಾರತೀಯ ಕರಾವಳಿ ಪಡೆಯ ಹಡಗು ಚಾಂದ್‌ಬೀಬಿ, ಕ್ಷಿಪಣಿ ಕಾವಲು ನೌಕೆ ಐಎನ್‌ಎಸ್‌ ವಿಜಯದುರ್ಗ, ಕ್ಷಿಪಣಿ ವಿಧ್ವಂಸಕ ಹಡಗುಗಳಾದ ಐಎನ್‌ಎಸ್‌ ರಾಣಾ ಮತ್ತು ಐಎನ್‌ಎಸ್‌ ದೆಹಲಿ ಇವರ ನೇತೃತ್ವದಲ್ಲಿಯೇ ಕಾರ್ಯಾಚರಣೆ ನಡೆಸಿದ್ದವು.

ಸೇನೆಯಲ್ಲಿನ ಅವರ ಸೇವೆ ಪರಿಗಣಿಸಿ, ಪರಮ ವಿಶಿಷ್ಟ ಸೇವಾ ಪದಕ ಹಾಗೂ ಅತಿ ವಿಶಿಷ್ಟ ಸೇವಾ ಪದಕ ನೀಡಿ ಅವರನ್ನು ಗೌರವಿಸಲಾಗಿದೆ.

ನೌಕಾಪಡೆ ಮುಖ್ಯಸ್ಥರಾಗಿ ಮೂರು ವರ್ಷವಾದ ನಂತರ ಅಥವಾ ವಯೋಮಿತಿ 62 ವರ್ಷವಾದ ನಂತರ ನಿವೃತ್ತರಾಗಬೇಕಾಗುತ್ತದೆ. ಇವರೆಡರಲ್ಲಿ ಯಾವುದು ಮೊದಲು ಅನ್ವಯವಾಗುವುದು, ಅದರಂತೆ ನೌಕಾಪಡೆ ಮುಖ್ಯಸ್ಥರು ನಿವೃತ್ತರಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.