ADVERTISEMENT

ಮದ್ರಾಸ್‌ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಗೌರಿ ಪ್ರಮಾಣ

ಪಿಟಿಐ
Published 7 ಫೆಬ್ರುವರಿ 2023, 15:18 IST
Last Updated 7 ಫೆಬ್ರುವರಿ 2023, 15:18 IST
ಲಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿ
ಲಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿ   

ಚೆನ್ನೈ (ಪಿಟಿಐ): ಮದ್ರಾಸ್‌ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ವಕೀಲೆ ಲಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿ ಅವರು ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು.

‘ಮುಸ್ಲಿಮರು ಹಾಗೂ ಕ್ರೈಸ್ತರ ಕುರಿತು ‘ದ್ವೇಷ ಭಾಷಣ’ ಮಾಡಿದ್ದಾರೆ. ಜೊತೆಗೆ ಗೌರಿ ಅವರಿಗೆ ಬಿಜೆಪಿಯೊಂದಿಗೆ ನಂಟಿದೆ. ಹಾಗಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ತಡೆ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೂ ಅರ್ಜಿ ಸಲ್ಲಿಸಿದ್ದರು. ಆದರೆ, ಸುಪ್ರೀಂ ಕೋರ್ಟ್‌ ಈ ಅರ್ಜಿಯನ್ನು ವಜಾ ಮಾಡಿದೆ.

ವಕೀಲರಾದ ಅಣ್ಣಾ ಮ್ಯಾಥ್ಯೂ, ಸುಧಾ ರಾಮಲಿಂಗಂ ಹಾಗೂ ಡಿ. ನಾಗಶೈಲಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲೇ, ಗೌರಿ ಅವರು ಮದ್ರಾಸ್‌ ಹೈಕೋರ್ಟ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಮದ್ರಾಸ್‌ ಹೈಕೋರ್ಟ್‌ನ ಹಂಗಾಮಿ ಮುಖ್ಯನ್ಯಾಯಮೂರ್ತಿ ಟಿ. ರಾಜಾ ಅವರು ಪ್ರಮಾಣ ವಚನ ಬೋಧಿಸಿದರು.

ADVERTISEMENT

ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಗೌರಿ, ‘ಸಂವಿಧಾನ ಶಿಲ್ಪಿಗಳ ಕನಸನ್ನು ನನಸು ಮಾಡುವಂಥ ನ್ಯಾಯದಾನ ಮಾಡುತ್ತೇನೆ’ ಎಂದರು.

ಸ್ವಾಮಿ ವಿವೇಕಾನಂದರ ನುಡಿಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು, ‘ಅತಿ ದೊಡ್ಡ ಜವಾಬ್ದಾರಿಯನ್ನು ನನಗೆ ವಹಿಸಲಾಗಿದೆ. ದನಿ ಇಲ್ಲದ, ದಮನಿತರ ಪರವಾಗಿ ಕೆಲಸ ಮಾಡಲು ನನಗೆ ಈ ಜವಾಬ್ದಾರಿ ನೀಡಲಾಗಿದೆ ಎನ್ನುವ ಅರಿವಿದೆ’ ಎಂದರು.

‘ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಒಂದು ಕುಗ್ರಾಮ ನನ್ನ ಊರು. ಸಾಧಾರಣ ಕುಟುಂಬದಲ್ಲಿ ನಾನು ಜನಿಸಿದ್ದು. ನನ್ನ ಕುಟುಂಬದಲ್ಲಿ ನಾನೇ ಮೊದಲು ವಕೀಲೆಯಾಗಿದ್ದು’ ಎಂದು ಭಾಷಣದಲ್ಲಿ ತಮ್ಮ ಹಿನ್ನೆಲೆಯನ್ನು ನೆನಪಿಸಿಕೊಂಡರು.

***

ಸಮಾಜದಲ್ಲಿರುವ ಅಸಮಾನತೆಯನ್ನು ತೊಡೆದು ಹಾಕಿ, ವೈವಿಧ್ಯ ಭಾರತದ ಸಹೋದರತೆಯನ್ನು ಕಾಪಾಡುತ್ತೇನೆ

ಲಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿ, ಹೆಚ್ಚುವರಿ ನ್ಯಾಯಮೂರ್ತಿ, ಮದ್ರಾಸ್‌ ಹೈಕೋರ್ಟ್‌

****

ಪ್ರಮಾಣವಚನಕ್ಕೆ ತಡೆ ಕೋರಿದ್ದ ಅರ್ಜಿ ವಜಾ

ನವದೆಹಲಿ (ಪಿಟಿಐ): ಗೌರಿ ಅವರು ಮದ್ರಾಸ್‌ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸುವುದನ್ನು ತಡೆಯಬೇಕು ಎಂದು ಕೋರಿ ಕೆಲ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ವಜಾ ಮಾಡಿದೆ.

ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ಬಿ.ಆರ್‌. ಗವಾಯಿ ಅವರಿದ್ದ ಪೀಠ ನ್ಯಾಯಾಲಯವು ನಿತ್ಯ ಪ್ರಾರಂಭವಾಗುವುದಕ್ಕೆ ಐದು ನಿಮಿಷ ಮೊದಲೇ ಈ ಅರ್ಜಿಯ ವಿಚಾರಣೆ ಪ್ರಾರಂಭಿಸಿತು.

‘ಕೊಲಿಜಿಯಂ ಒಂದು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದಾದರೆ, ಅದರ ಹಿಂದೆ, ಆಯಾ ಹೈಕೋರ್ಟ್‌ನ ನ್ಯಾಯಮೂರ್ತಿಗಳಿಂದಲೂ ಅಭಿಪ್ರಾಯವನ್ನು ತೆಗೆದುಕೊಳ್ಳುತ್ತದೆ ಎಂದರ್ಥ. ಸಂಬಂಧಪಟ್ಟ ಹೈಕೋರ್ಟ್‌ನ ನ್ಯಾಯಮೂರ್ತಿಗಳಿಗೆ ಈ ಎಲ್ಲಾ ವಿಚಾರಗಳು ತಿಳಿದಿಲ್ಲ ಎಂದು ನೀವು ಹೇಗೆ ಭಾವಿಸುತ್ತೀರಿ’ ಎಂದು ಪೀಠ ಪ್ರಶ್ನಿಸಿತು.

‘ಪ್ರಮಾಣವಚನಕ್ಕೆ ಅನುಗುಣವಾಗಿ ನಡೆದುಕೊಳ್ಳದಿದ್ದರೆ, ಪ್ರಮಾಣವಚನಕ್ಕೆ ತಕ್ಕಂತೆ ಕರ್ತವ್ಯ ನಿರ್ವಹಿಸದಿದ್ದರೆ ಕೊಲಿಜಿಯಂ ಕ್ರಮ ಕೈಗೊಳ್ಳಲಿದೆ. ಈ ಹಿಂದೆಯೂ ಹೆಚ್ಚುವರಿ ನ್ಯಾಯಮೂರ್ತಿಗಳನ್ನು ಕಾಯಂ ಮಾಡದಿರುವ ನಿದರ್ಶನಗಳು ಇವೆ’ ಎಂದು ಪೀಠವು ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.