ADVERTISEMENT

ಹೈಕೋರ್ಟ್‌ ವರ್ಚುವಲ್‌ ವಿಚಾರಣೆ ವೇಳೆ ಹುಕ್ಕಾ ಸೇದಿದ ಹಿರಿಯ ವಕೀಲ ಧವನ್‌!

ಪಿಟಿಐ
Published 14 ಆಗಸ್ಟ್ 2020, 3:12 IST
Last Updated 14 ಆಗಸ್ಟ್ 2020, 3:12 IST
   

ಜೈಪುರ: ಪ್ರಕರಣವೊಂದರ ಕುರಿತ ರಾಜಸ್ಥಾನ ಹೈಕೋರ್ಟ್‌ನ ವರ್ಚುವಲ್‌ ವಿಚಾರಣೆ ವೇಳೆ ಹಿರಿಯ ವಕೀಲ ರಾಜೀವ್‌ ಧವನ್‌ ಅವರು ಹುಕ್ಕಾ ಸೇದಿರುವ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಹಿನ್ನೆಲೆಯಲ್ಲಿ, ಧೂಮಪಾನದ ಅಪಾಯಗಳ ಕುರಿತು ಹೈಕೋರ್ಟ್‌ನ ನ್ಯಾಯಮೂರ್ತಿಗಳು ರಾಜೀವ್‌ ಧವನ್‌ ಅವರಿಗೆ ಕೆಲ ಸಲಹೆಗಳನ್ನೂ ನೀಡಿದ್ದಾರೆ.

ಮುಖಕ್ಕೆ ಅಡ್ಡಲಾಗಿ ಕಾಗದ ಪತ್ರಗಳನ್ನು ಹಿಡಿದ ಧವನ್‌, ಅದರ ಮರೆಯಲ್ಲೇ ಹುಕ್ಕಾಸೇದಿದ್ದಾರೆ. ನಂತರ ಹೊಗೆಯು ಕಾಗದದ ಮರೆಯನ್ನೂ ಮೀರಿ ಹರಡಿಕೊಳ್ಳುತ್ತದೆ. ಕಾಗದವನ್ನು ಪಕಕ್ಕೆ ಇಟ್ಟಾಗ ಹುಕ್ಕಾದ ನಳಿಕೆ ವಿಡಿಯೊದಲ್ಲಿ ಗೋಚರವಾಗುತ್ತದೆ.

ಹೈಕೋರ್ಟ್‌ ನ್ಯಾಯಮೂರ್ತಿ ಅರುಣ್‌ ಮಿಶ್ರಾ ಅವರ ಪೀಠಮಂಗಳವಾರ ನಡೆಸಿದ ವಿಚಾರಣೆ ವೇಳೆ ಈ ಘಟನೆ ನಡೆದಿದೆ.

ADVERTISEMENT

2018ರಲ್ಲಿ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‌ಪಿಯಿಂದ ಆಯ್ಕೆಯಾಗಿದ್ದ ಆರು ಶಾಸಕರು ಇಡೀ ಪಕ್ಷವನ್ನು ರಾಜಸ್ಥಾನ ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಿದ್ದಾರೆ. ಇದನ್ನು ಪ್ರಶ್ನಿಸಿ ಬಿಎಸ್‌ಪಿ ಮತ್ತು ಬಿಜೆಪಿ ಪಕ್ಷಗಳು ರಾಜಸ್ಥಾನ ಹೈಕೋರ್ಟ್‌ ಮೆಟ್ಟಿಲೇರಿವೆ. ಈ ಪ್ರಕರಣದಲ್ಲಿ ರಾಜೀವ್‌ ಧವನ್‌ ಅವರು ಆರು ಮಂದಿ ಬಿಎಸ್‌ಪಿ ಶಾಸಕರನ್ನು ಪ್ರತಿನಿಧಿಸುತ್ತಿದ್ದಾರೆ.

ಮಂಗಳವಾರ ವಿಚಾರಣೆ ವೇಳೆ ರಾಜೀವ್‌ ಧವನ್‌ ಅವರ ಈ ನಡೆ ಗಮನಿಸಿರುವ ನ್ಯಾಯಮೂರ್ತಿ ಮಿಶ್ರಾ ಅವರು, ಗುರುವಾರದ ವಿಚಾರಣೆ ವೇಳೆ ವಿಷಯ ಪ್ರಸ್ತಾಪಿಸಿದರು. ‘ನೀವು ಏನು ಮಾಡುತ್ತಿದ್ದಿರಿ? ನಾನು ನೋಡಿದೆ. ಈ ಇಳಿ ವಯಸ್ಸಿನಲ್ಲಿರುವ ಧವನ್‌ ಅವರು ಧೂಮಪಾನ ಕೈಬಿಡುವುದು ಲೇಸು,’ ಎಂದು ಹೇಳಿದರು. ಅದಕ್ಕೆ ಧವನ್‌ ಕೂಡ ಸಮ್ಮತಿಸಿದರು. ಅಲ್ಲದೆ, ‘ವಿಡಿಯೊ ಕಾನ್ಫರೆನ್ಸ್‌ಗೆ ತಾವು ಒಗ್ಗಿಕೊಂಡಿಲ್ಲ. ಹೀಗಾಗಿ ‍ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ,’ ಎಂದು ಅವರು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.