ADVERTISEMENT

ವಿಡಿಯೊ: ರಾಂಚಿ– ಯುವ ಕುಸ್ತಿ ಪಟುವಿನ ಕಪಾಳಕ್ಕೆ ಹೊಡೆದ ಬಿಜೆಪಿ ಸಂಸದ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಡಿಸೆಂಬರ್ 2021, 10:40 IST
Last Updated 18 ಡಿಸೆಂಬರ್ 2021, 10:40 IST
ಟ್ವಿಟರ್ ವಿಡಿಯೊ ಸ್ಕ್ರೀನ್ ಗ್ರ್ಯಾಬ್
ಟ್ವಿಟರ್ ವಿಡಿಯೊ ಸ್ಕ್ರೀನ್ ಗ್ರ್ಯಾಬ್   

ರಾಂಚಿ: ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ನಡೆಯುತ್ತಿರುವ ಕುಸ್ತಿ ರಾಷ್ಟ್ರೀಯ ಚಾಂಪಿಯನ್‌ಷಿಪ್ ಪಂದ್ಯಾವಳಿಯಲ್ಲಿ ಬಿಜೆಪಿ ಸಂಸದರೊಬ್ಬರು ಯುವ ಕುಸ್ತಿಪಟುವಿನ ಕಪಾಳಕ್ಕೆ ಹೊಡೆದಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷರೂ ಆಗಿರುವ ಸಂಸದ ಬ್ರಿಜ್‌ ಭೂಷಣ್ ಶರಣ್ ಸಿಂಗ್ ಅವರು, ವೇದಿಕೆಯಿಂದ ಕೆಳಗಿಳಿಯುವ ಮುನ್ನ ಎರಡು ಬಾರಿ ಯುವ ಕುಸ್ತಿಪಟುವಿನ ಕಪಾಳಕ್ಕೆ ಹೊಡೆದಿರುವ ದೃಶ್ಯ ವಿಡಿಯೊದಲ್ಲಿದೆ.

ಉತ್ತರ ಪ್ರದೇಶದ ಕೈಸರ್ ಗಂಜ್ ಕ್ಷೇತ್ರವನ್ನು ಪ್ರತಿನಿಧಿಸುವ ಸಿಂಗ್, ರಾಂಚಿಯ ಶಾಹೀದ್ ಗಣಪತ್ ರಾಯ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 15 ವರ್ಷದೊಳಗಿನವರ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನ ಮೊದಲ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಕುಸ್ತಿಪಟು ಒಬ್ಬರ ವಯಸ್ಸು 15 ವರ್ಷ ಮೇಲ್ಪಟ್ಟಿದ್ದರಿಂದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ನೀಡಿರಲಿಲ್ಲ. ಆದರೂ ಆತ ತನಗೆ ಭಾಗವಹಿಸಲು ಅವಕಾಶ ನೀಡುವಂತೆ ಸಂಸದರಿಗೆ ದುಂಬಾಲು ಬಿದ್ದಿದ್ದನು. ಈ ಸಂದರ್ಭ, ತಾಳ್ಮೆ ಕಳೆದುಕೊಂಡ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು, ಕುಸ್ತಿಪಟುವಿನ ಕಪಾಳಕ್ಕೆ ಬಾರಿಸಿದ್ಧಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ADVERTISEMENT

ಸಂಸದರು, ಯುವ ಕುಸ್ತಿಪಟುವಿಗೆ ಹೊಡೆದಿರುವ ವಿಡಿಯೊವನ್ನು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.