
ಪ್ರಜಾವಾಣಿ ವಾರ್ತೆ
ತಿರುವನಂತಪುರ: ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರವನ್ನು ವಿರೋಧಿಸಿ, ಜಾತ್ಯತೀತ ಜನತಾ ದಳ (ಜೆಡಿಎಸ್) ಪಕ್ಷದ ಕೇರಳ ಘಟಕವು, ಹೊಸದಾಗಿ ಸ್ಥಾಪನೆಯಾಗಿರುವ ಭಾರತೀಯ ಸಮಾಜವಾದಿ ಜನತಾದಳದೊಂದಿಗೆ (ಐಎಸ್‌ಜೆಡಿ) ವಿಲೀನಗೊಳ್ಳಲು ನಿರ್ಧರಿಸಿದೆ.
ಆಡಳಿತಾರೂಢ ಎಲ್‌ಡಿಎಫ್(ಎಡ ಪ್ರಜಾಸತ್ತಾತ್ಮಕ ರಂಗ) ಭಾಗವಾಗಿರುವ ಜೆಡಿಎಸ್, ಐಎಸ್‌ಜೆಡಿಯೊಂದಿಗೆ ವಿಲೀನಗೊಳ್ಳುತ್ತಿರುವ ವಿಚಾರವನ್ನು ಇಂಧನ ಸಚಿವ ಕೆ. ಕೃಷ್ಣನ್ ಕುಟ್ಟಿ ಸೇರಿದಂತೆ ಪಕ್ಷದ ಇಬ್ಬರು ಶಾಸಕರು ವಿಧಾನಸಭಾ ಸ್ಪೀಕರ್‌ಗೆ ಅಧಿಕೃತವಾಗಿ ತಿಳಿಸಿದ್ದಾರೆ. ಜೆಡಿಎಸ್ ಪಕ್ಷವು ಐಎಸ್‌ಜೆಡಿಯಲ್ಲಿ ಅಧಿಕೃತವಾಗಿ ವಿಲೀನಗೊಳ್ಳುವ ಸಭೆಯು ಇದೇ 17ರಂದು ಕೊಚ್ಚಿಯಲ್ಲಿ ನಡೆಯಲಿದೆ.
ಜೆಡಿಎಸ್ ಕೇರಳ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಶಾಸಕ ಮ್ಯಾಥ್ಯೂ ಟಿ. ಥಾಮಸ್, ‘ಜೆಡಿಎಸ್, ಹೊಸ ಪಕ್ಷದೊಂದಿಗೆ ವಿಲೀನಗೊಳ್ಳುತ್ತಿರುವುದರಿಂದ, ಪಕ್ಷದ ಇಬ್ಬರೂ ಶಾಸಕರಿಗೆ ಸದಸ್ಯತ್ವದ ಅನರ್ಹತೆ ಪ್ರಶ್ನೆ ಎದುರಾಗುವುದಿಲ್ಲ’ ಎಂದು ಹೇಳಿದ್ದಾರೆ.
2024ರ ಲೋಕಸಭಾ ಚುನಾವಣೆ ವೇಳೆ, ಕರ್ನಾಟಕದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಪಕ್ಷದ ರಾಷ್ಟ್ರೀಯ ನಾಯಕರ ನಿರ್ಧಾರವನ್ನು ವಿರೋಧಿಸಿದ ಒಂದು ಬಣ, ಐಎಸ್‌ಜೆಡಿ ಸ್ಥಾಪನೆ ಮಾಡಿತು. ಬಿಜೆಪಿಯೊಂದಿಗಿನ ಮೈತ್ರಿಯ ನಿರ್ಧಾರ, 2022ರಲ್ಲಿ ಪಕ್ಷ ಅಂಗೀಕರಿಸಿದ ರಾಜಕೀಯ ನಿರ್ಣಯಕ್ಕೆ ವಿರುದ್ಧವಾಗಿದೆ ಎಂದು ಥಾಮಸ್ ಹೇಳಿದರು.
ಕೇರಳದ ಜೆಡಿಎಸ್‌ನ ಎಲ್ಲ ಜಿಲ್ಲಾ ಘಟಕಗಳು ಹೊಸ ಪಕ್ಷದೊಂದಿಗೆ ವಿಲೀನಗೊಳ್ಳಲು ಸರ್ವಾನುಮತದಿಂದ ನಿರ್ಧರಿಸಿವೆ. ಇತರ ರಾಜ್ಯಗಳಿಂದಲೂ ಸಮಾನ ಮನಸ್ಕ ಪಕ್ಷದ ಕಾರ್ಯಕರ್ತರು, ಐಎಸ್‌ಜೆಡಿ ಸೇರುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.