ADVERTISEMENT

ಇ.ಸಿ ನೇಮಕದಲ್ಲಿ ಕಾನೂನು ಉಲ್ಲಂಘನೆ: ಸುಪ್ರೀಂ ಕೋರ್ಟ್‌

ಪಿಟಿಐ
Published 24 ನವೆಂಬರ್ 2022, 19:25 IST
Last Updated 24 ನವೆಂಬರ್ 2022, 19:25 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ (ಪಿಟಿಐ):‘ಚುನಾವಣಾ ಆಯುಕ್ತರ (ಇ.ಸಿ) ನೇಮಕಾತಿಯಲ್ಲಿ ಕೇಂದ್ರ ಸರ್ಕಾರವು ಕಾನೂನು ಉಲ್ಲಂಘಿಸಿದೆ. ಇದನ್ನು ನಾವು ಸ್ಪಷ್ಟವಾಗಿ ಹೇಳುತ್ತಿದ್ದೇವೆ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಚುನಾವಣಾ ಆಯುಕ್ತರ ನೇಮಕಾತಿಗೆ ಕೊಲಿಜಿಯಂ ಸ್ವರೂಪದ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಹಲವು ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಈ ಮಾತು ಹೇಳಿದೆ. ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ನೇತೃತ್ವದ ಐವರು ಸದಸ್ಯರ ಸಂವಿಧಾನ ಪೀಠವು,ಸರ್ಕಾರವು ಉದ್ದೇಶಪೂರ್ವಕವಾಗಿಯಾವ ಚುನಾವಣಾ ಆಯುಕ್ತರಿಗೂ ಆರು ವರ್ಷಗಳ ಅಧಿಕಾರದ ಅವಧಿ ಸಿಗದಂತೆ ನೋಡಿಕೊಳ್ಳುತ್ತಿದೆ ಎಂದು ಹೇಳಿದೆ.

ಅರುಣ್ ಗೋಯಲ್‌ ಅವರನ್ನು ಚುನಾವಣಾ ಆಯುಕ್ತರಾಗಿ ನೇಮಕ ಮಾಡಿದ್ದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪೀಠವು ಪರಿಶೀಲಿಸಿದೆ.

ADVERTISEMENT

ಚುನಾವಣಾ ಆಯುಕ್ತರ ಅಧಿಕಾರದ ಅವಧಿ ಗರಿಷ್ಠ ಆರು ವರ್ಷ ಎಂದು ಕಾನೂನು ಹೇಳುತ್ತದೆ. ಆದರೆ, 2004ರ ನಂತರ ಯಾವ ಚುನಾವಣಾ ಆಯುಕ್ತರಿಗೂ ಆರು ವರ್ಷಗಳ ಅವಧಿ ದೊರೆತಿಲ್ಲ ಎಂದು ಪೀಠವು ಬುಧವಾರದ ವಿಚಾರಣೆ ವೇಳೆ ಹೇಳಿತ್ತು.

‘ಇದಕ್ಕೆ ಸಂಬಂಧಿಸಿದಂತೆ ಕಾನೂನು ಇದೆ. ಆ ಕಾನೂನು ಪಾಲಿಸಲು ಏನೇನು ಅಗತ್ಯವೋ ಅದನ್ನು ನೀವು ಮಾಡಬೇಕು ಎಂದು ನಾವು ನಿರೀಕ್ಷಿಸುತ್ತೇವೆ. ಆದರೆ, ಚುನಾವಣಾ ಆಯುಕ್ತರಾಗಿ ನೇಮಕ ಮಾಡಿಕೊಳ್ಳಲು ನೀವು ಆಯ್ಕೆ ಮಾಡಿದ ಅಭ್ಯರ್ಥಿಗಳೆಲ್ಲರೂ ನಿವೃತ್ತ ಅಧಿಕಾರಿಗಳೇ ಏಕೆ ಆಗಿದ್ದಾರೆ? ಬೇರೆಯವರು ಯಾಕಿಲ್ಲ? ಜ್ಯೇಷ್ಠತೆಯೇ ಅರ್ಹತೆಯಾದರೆ, 40 ಅರ್ಹ ಅಧಿಕಾರಿಗಳು ಇದ್ದರು. ಹೀಗಿದ್ದೂ ಕೇವಲ ನಾಲ್ವರನ್ನು ಏಕೆ ಆಯ್ಕೆ ಮಾಡಿದ್ದೀರಿ? ಉಳಿದ 36 ಮಂದಿಯನ್ನು ಕೈಬಿಟ್ಟಿದ್ದು ಏಕೆ’ ಎಂದು ಪೀಠವು ಸರ್ಕಾರವನ್ನು ಪ್ರಶ್ನಿಸಿತು.

‘ಅರ್ಹ ಯುವ ಅಭ್ಯರ್ಥಿಗಳ ಅವಕಾಶವನ್ನು ನೀವು ಕಸಿಯುತ್ತಿಲ್ಲವೇ? ಯಾವುದೇ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರಿಗೆ ಆರು ವರ್ಷಗಳ ಪೂರ್ಣ ಅವಧಿ ಸಿಗಬಾರದು ಎಂದು ನೀವು ಪಟ್ಟು ಹಿಡಿದು ಕೂತಿದ್ದೀರಿ. ಇದು ಕಾನೂನಿಗೆ ವಿರುದ್ಧ. ನಿಮ್ಮ ಪ್ರಕಾರ ಯಾವ ಚುನಾವಣಾ ಆಯುಕ್ತರೂ ಆರು ವರ್ಷಗಳ ಅವದಿ ಪೂರೈಸಬಾರದು. ಇದು ಕಾನೂನೇ? ಕಾನೂನನ್ನು ನೀವು ಉಲ್ಲಂಘಿಸುತ್ತಿದ್ದೀರಿ ಮತ್ತು ನಾವು ಇದನ್ನು ಸ್ಪಷ್ಟವಾಗಿ ಹೇಳುತ್ತಿದ್ದೇವೆ’ ಎಂದು ಪೀಠವು ಸರ್ಕಾರಕ್ಕೆ ಹೇಳಿತು.

ಈ ಅರ್ಜಿಗಳಿಗೆ ಸಂಬಂಧಿಸಿದಂತೆ ವಾದಿಗಳು ಮತ್ತು ಪ್ರತಿವಾದಿಯಾದ ಸರ್ಕಾರಕ್ಕೆ ಲಿಖಿತ ಹೇಳಿಕೆ ನೀಡುವಂತೆ ಪೀಠವು ಸೂಚಿಸಿದೆ. ತೀರ್ಪನ್ನು ಕಾಯ್ದಿರಿಸಿದೆ.

‘ಸ್ವಲ್ಪಹೊತ್ತು ಸುಮ್ಮನಿರಿ’: ವಿಚಾರಣೆ ವೇಳೆ ಸರ್ಕಾರದ ಪರವಾಗಿ ವಾದ ಮಾಡುತ್ತಿದ್ದ ಅಟಾರ್ನಿ ಜನರಲ್ ಆರ್‌.ವೆಂಕಟರಮಣಿ ಅವರ ಮಾತನ್ನು ವಕೀಲ ಪ್ರಶಾಂತ್ ಭೂಷಣ್ ತಡೆದರು. ಪೀಠದ ಮುಂದೆ ವಿಷಯ ಪ್ರಸ್ತಾಪಿಸಲು ಯತ್ನಿಸಿದರು. ಆಗ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ವೆಂಕಟರಮಣಿ, ‘ನೀವು ಸ್ವಲ್ಪಹೊತ್ತು ಸುಮ್ಮನಿರಿ’ ಎಂದು ಪ್ರಶಾಂತ್ ಭೂಷಣ್‌ಗೆ ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.