ADVERTISEMENT

ವಲಸೆ ಕಾರ್ಮಿಕರಿಗೆ ಗಡಿ ಬಂದ್‌

ಉತ್ತರ ಪ್ರದೇಶದಲ್ಲಿ ಬ್ಯಾರಿಕೇಡ್‌ ಮುರಿಯಲು ಯತ್ನ, ಲಾಠಿ ಬೀಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 18 ಮೇ 2020, 4:10 IST
Last Updated 18 ಮೇ 2020, 4:10 IST
ಬಿಹಾರದಲ್ಲಿರುವ ತಮ್ಮ ಮನೆಗಳಿಗೆ ತೆರಳಲು ವಾಹನ ವ್ಯವಸ್ಥೆ ಮಾಡುವಂತೆ ಅಹಮದಾಬಾದ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಲಸೆ ಕಾರ್ಮಿಕರನ್ನು ಚದುರಿಸಲು ಪೊಲೀಸರೊಬ್ಬರು ಲಾಠಿ ಬೀಸಿದರು  –ಪಿಟಿಐ ಚಿತ್ರ
ಬಿಹಾರದಲ್ಲಿರುವ ತಮ್ಮ ಮನೆಗಳಿಗೆ ತೆರಳಲು ವಾಹನ ವ್ಯವಸ್ಥೆ ಮಾಡುವಂತೆ ಅಹಮದಾಬಾದ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಲಸೆ ಕಾರ್ಮಿಕರನ್ನು ಚದುರಿಸಲು ಪೊಲೀಸರೊಬ್ಬರು ಲಾಠಿ ಬೀಸಿದರು  –ಪಿಟಿಐ ಚಿತ್ರ   

ಲಖನೌ: ಉತ್ತರ ಪ್ರದೇಶ ಸರ್ಕಾರ ತನ್ನ ಗಡಿಭಾಗಗಳನ್ನು ಬಂದ್ ಮಾಡಿದ ಕಾರಣ, ಭಾನುವಾರ ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ ಮತ್ತು ದೆಹಲಿಯ ಗಡಿಭಾಗಗಳಲ್ಲಿ ಸಿಲುಕಿದ್ದ ಸಾವಿರಾರು ವಲಸೆ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಪೊಲೀಸ್ ಬ್ಯಾರಿಕೇಡ್‌ಗಳನ್ನು ಮುರಿದು ಉತ್ತರ ಪ್ರದೇಶದ ಗಡಿಯೊಳಗೆ ನುಗ್ಗಲು ಯತ್ನಿಸಿದ ಕಾರ್ಮಿಕರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು.ಕಾರ್ಮಿಕರು ಹೆದ್ದಾರಿಗಳನ್ನು ಬಂದ್ ಮಾಡಿ, ಟೈರುಗಳನ್ನು ಸುಟ್ಟು, ವಾಹನಗಳಿಗೆ ಹಾನಿ ಮಾಡಿದ್ದಾರೆಂದು ವರದಿಗಳು ತಿಳಿಸಿವೆ.

ಉತ್ತರಪ್ರದೇಶ–ಮಧ್ಯಪ್ರದೇಶ ಗಡಿ ಭಾಗ ರೇವಾನ್ ಜಿಲ್ಲೆಯಲ್ಲಿ ನಿರ್ಮಿಸಲಾಗಿದ್ದ ತಡೆಗೋಡೆಗಳನ್ನು ನೆಲಸಮ ಮಾಡಿದ ಕಾರ್ಮಿಕರು ಬಲವಂತವಾಗಿ ರಾಜ್ಯ ಪ್ರವೇಶಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಅಸಹಾಯಕತೆಯಿಂದ ನೋಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ADVERTISEMENT

ಟ್ರಕ್‌ಗಳ ನಡುವೆ ಶನಿವಾರ ಸಂಭವಿಸಿದ ಅಪಘಾತದಲ್ಲಿ ಟ್ರಕ್‌ನಲ್ಲಿದ್ದ 26 ಕಾರ್ಮಿಕರು ಸಾವನ್ನಪ್ಪಿದ ಬಳಿಕ ಉತ್ತರ ಪ್ರದೇಶ ಸರ್ಕಾರ ಎಚ್ಚೆತ್ತುಕೊಂಡಿದ್ದು, ವಲಸೆ ಕಾರ್ಮಿಕರನ್ನು ಸರ್ಕಾರ ವ್ಯವಸ್ಥೆ ಮಾಡಿರುವ ಬಸ್‌ಗಳಲ್ಲಿಯೇ ಅವರೂರಿಗೆ ಕಳುಹಿಸಬೇಕು. ವಲಸೆ ಕಾರ್ಮಿಕರಿಗೆ ಕಾಲ್ನಡಿಗೆ ಮತ್ತು ಇತರ ವಾಹನ ಪ್ರಯಾಣವನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

ಉತ್ತರ ಪ್ರದೇಶ–ಮಧ್ಯಪ್ರದೇಶದ ಗಡಿಯ ಝಾನ್ಸಿ ಜಿಲ್ಲೆಯ ರುಕ್ಸಾದಲ್ಲಿ ವಲಸೆ ಕಾರ್ಮಿಕರಿದ್ದ ನೂರಾರು ವಾಹನಗಳು ಸಿಲುಕಿಕೊಂಡಿವೆ. ಪೊಲೀಸರು ಅವರಿಗೆ ರಾಜ್ಯ ಪ್ರವೇಶಿಸದಂತೆ ತಡೆಯೊಡ್ಡಿದ್ದು, ಅವರನ್ನು ಬಸ್ಸುಗಳ ಮೂಲಕ ಅವರ ಗ್ರಾಮಗಳಿಗೆ ತಲುಪಿಸುವುದಾಗಿ ಹೇಳಿದ್ದಾರೆ. ಆದರೆ, ಕಾರ್ಮಿಕರು ತಮ್ಮದೇ ವಾಹನಗಳಲ್ಲಿ ಗ್ರಾಮಗಳಿಗೆ ತೆರಳುವುದಾಗಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ವಲಸೆ ಕಾರ್ಮಿಕರ ವಿರುದ್ಧ ಪೊಲೀಸ್ ಬಲ ಪ್ರಯೋಗಿಸಿದ್ದಕ್ಕೆ ಸಮಾಜವಾದಿ ಪಕ್ಷಆಕ್ಷೇಪ ವ್ಯಕ್ತಪಡಿಸಿದ್ದು, ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ತಮ್ಮೂರಿಗೆ ತೆರಳಲು ವಲಸೆ ಕಾರ್ಮಿಕರಿಗೆ ಅವಕಾಶ ನೀಡಬೇಕೆಂದು ಉತ್ತರ ಪ್ರದೇಶ ಸರ್ಕಾರಕ್ಕೆ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.