ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಿರಾರ್ ನಗರದಲ್ಲಿ ನಾಲ್ಕು ಅಂತಸ್ತಿನ ಅನಧಿಕೃತ ಅಪಾರ್ಟ್‌ಮೆಂಟ್ ಕುಸಿದ ಪರಿಣಾಮ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು, ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿರಾರ್ ಪ್ರದೇಶದ ವಿಜಯ್ ನಗರದಲ್ಲಿರುವ 50 ಫ್ಲಾಟ್‌ಗಳನ್ನು ಹೊಂದಿರುವ ‘ರಮಾಬಾಯಿ ಅಪಾರ್ಟ್‌ಮೆಂಟ್’ ಬುಧವಾರ ಮಧ್ಯಾಹ್ನ ಪಕ್ಕದಲ್ಲಿದ್ದ ಕಟ್ಟಡಗಳ ಮೇಲೆ ಕುಸಿದು ಬಿದ್ದಿತ್ತು.
‘ನಾಲ್ಕನೇ ಮಹಡಿಯಲ್ಲಿ ಒಂದು ವರ್ಷದ ಬಾಲಕಿಯ ಹುಟ್ಟುಹಬ್ಬದ ಪಾರ್ಟಿ ನಡೆಯುತ್ತಿದ್ದ ವೇಳೆಯೇ ಅಪಾರ್ಟ್‌ಮೆಂಟ್‌ನ ಒಂದು ಭಾಗ ಕುಸಿದು ಬಿದ್ದಿದೆ. ಫ್ಲಾಟ್‌ನಲ್ಲಿದ್ದ ನಿವಾಸಿಗಳು, ಅತಿಥಿಗಳು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
‘ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಸೇರಿದಂತೆ ಇತರ ರಕ್ಷಣಾ ತಂಡಗಳು ಘಟನಾ ಸ್ಥಳದಲ್ಲಿ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ನಡೆಸುತ್ತಿವೆ. ಘಟನೆಯಲ್ಲಿ ಇದುವರೆಗೆ 15 ಮಂದಿ ಮೃತಪಟ್ಟಿದ್ದು, ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ’ ಎಂದು ಪಾಲ್ಘರ್ ಜಿಲ್ಲಾಧಿಕಾರಿ ಡಾ. ಇಂದೂ ರಾಣಿ ಜಾಖರ್ ಮಾಹಿತಿ ನೀಡಿದ್ದಾರೆ.
2012ರಲ್ಲಿ ಈ ಅಪಾರ್ಟ್‌ಮೆಂಟ್ ಅನ್ನು ನಿರ್ಮಿಸಲಾಗಿತ್ತು. ಘಟನೆ ಸಂಬಂಧ ಅಪಾರ್ಟ್‌ಮೆಂಟ್ ಮಾಲೀಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕಟ್ಟಡವು ಅನಧಿಕೃತವಾಗಿತ್ತು ಎಂದು ವಿರಾರ್ ಮಹಾನಗರ ಪಾಲಿಕೆಯ ವಕ್ತಾರರು ದೃಢಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.