ADVERTISEMENT

26 ವಿಮಾನಗಳ ಹಾರಾಟ ಸ್ಥಗಿತಗೊಳಿಸಿದ ವಿಸ್ತಾರ: ಪೈಲಟ್‌ಗಳ ಜೊತೆ ಸಭೆ

ಪಿಟಿಐ
Published 3 ಏಪ್ರಿಲ್ 2024, 12:51 IST
Last Updated 3 ಏಪ್ರಿಲ್ 2024, 12:51 IST
 ವಿಸ್ತಾರ ಏರ್‌ಲೈನ್ಸ್
ವಿಸ್ತಾರ ಏರ್‌ಲೈನ್ಸ್   

ಮುಂಬೈ: ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ವಿಮಾನಗಳ ಸಂಚಾರ ಸ್ಥಗಿತಗೊಳಿಸಿರುವ ವಿಸ್ತಾರ ಏರ್‌ಲೈನ್ಸ್‌ನ ಹಿರಿಯ ಅಧಿಕಾರಿಗಳು, ಸಮಸ್ಯೆ ಬಗೆಹರಿಸುವ ಕುರಿತಂತೆ ಪೈಲಟ್‌ಗಳ ಜೊತೆ ಮಾತುಕತೆ ನಡೆಸಿದ್ದಾರೆ. ಪಾಳಿ ಪದ್ಧತಿ ಮತ್ತು ಹೊಸ ಒಪ್ಪಂದದ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.

ಬುಧವಾರವೂ ಟಾಟಾ ಸಮೂಹದ ಏರ್‌ಲೈನ್ಸ್ 26 ವಿಮಾನಗಳ ಹಾರಾಟ ರದ್ದು ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಪರಿಷ್ಕೃತ ವೇತನದ ವಿರುದ್ಧ ಅಸಮಾಧಾನಗೊಂಡಿರುವ ಪೈಲಟ್‌ಗಳ ಒಂದು ವರ್ಗವು ಪ್ರತಿಭಟನೆ ನಡೆಸುತ್ತಿದ್ದು, ಕಳೆದ ಎರಡು ದಿನಗಳಲ್ಲಿ 100ಕ್ಕೂ ಅಧಿಕ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ವಿಮಾನಗಳ ಹಾರಾಟ ರದ್ದು ಮತ್ತು ವಿಳಂಬದ ಕುರಿತಂತೆ ನಿತ್ಯ ವರದಿ ಸಲ್ಲಿಸುವಂತೆ ವೈಮಾನಿಕ ಕಾರ್ಯಾಚರಣೆಗಳ ಮೇಲ್ವಿಚಾರಣೆ ಮಾಡುವ ಡಿಜಿಸಿಎ ಸೂಚಿಸಿದೆ.

ADVERTISEMENT

ವಿಸ್ತಾರ ಏರ್‌ಲೈನ್ಸ್ ಸಿಇಒ ವಿನೋದ್ ಕಣ್ಣನ್ ಸೇರಿದಂತೆ ಉನ್ನತಾಧಿಕಾರಿಗಳು ಇಂದು ಪೈಲಟ್‌ಗಳ ಸಮಸ್ಯೆ ಬಗೆಹರಿಸುವ ಕುರಿತಂತೆ ಅವರ ಜೊತೆ ವರ್ಚುವಲ್ ಸಭೆ ನಡೆಸಿದ್ದಾರೆ. ಮಾನವ ಸಂಪನ್ಮೂಲ ಮತ್ತು ಇತರೆ ವಿಭಾಗಗಳ ಸಿಬ್ಬಂದಿ ಸಭೆಯಲ್ಲಿ ಹಾಜರಿದ್ದರು.

ಪೈಲಟ್‌ಗಳ ಜೊತೆ ಸಭೆ ಕುರಿತಂತೆ ವಿಸ್ತಾರ ಯಾವುದೇ ಅಧಿಕೃತ ಪ್ರಕಟಣೆಯನ್ನು ಬಿಡುಗಡೆ ಮಾಡಿಲ್ಲ. ವಿಮಾನಗಳ ಕಾರ್ಯಾಚರಣೆ ಸಾಮಾನ್ಯ ಸ್ಥಿತಿಗೆ ಬರುತ್ತಿದ್ದು, ರದ್ದಾದ ವಿಮಾನಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಪಾಳಿ ಪದ್ಧತಿ ಮತ್ತು ಕೆಲಸದ ಅವಧಿ ವಿಸ್ತರಣೆ ವಿಷಯಗಳ ಕುರಿತಾದ ಸಮಸ್ಯೆಯನ್ನು ಮೇ ತಿಂಗಳಲ್ಲಿ ಬಗೆಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಾರ್ಚ್ 31ರಿಂದ ಆರಂಭವಾಗಿರುವ ಬೇಸಿಗೆ ವೇಳಾಪಟ್ಟಿ ಪ್ರಕಾರ, ವಿಸ್ತಾರ ನಿತ್ಯ 300ಕ್ಕೂ ಅಧಿಕ ವಿಮಾನಗಳ ಹಾರಾಟ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.