ADVERTISEMENT

ವಿಶಾಖಪಟ್ಟಣ ಅನಿಲ ಸೋರಿಕೆ | ಕೇಂದ್ರದಿಂದ ಸಕಲ ಸಹಕಾರದ ಭರವಸೆ ನೀಡಿರುವ ಪ್ರಧಾನಿ

ಪಿಟಿಐ
Published 7 ಮೇ 2020, 11:49 IST
Last Updated 7 ಮೇ 2020, 11:49 IST
ಎನ್‌ಡಿಎಂಎ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ
ಎನ್‌ಡಿಎಂಎ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ    

ನವದೆಹಲಿ: ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಸಂಭವಿಸಿರುವ ಅನಿಲ ದುರಂತದಿಂದ 11 ಮಂದಿ ಸಾವಿಗೀಡಾಗಿದ್ದು, ಸುಮಾರು ಸಾವಿರ ಜನರು ಅಸ್ವಸ್ಥರಾಗಿದ್ದಾರೆ. ಎಲ್‌ಜಿ ಪಾಲಿಮರ್ಸ್‌ ರಾಸಾಯನಿಕ ಘಟಕದಿಂದ ಸ್ಟೈರೀನ್ ಸೋರಿಕೆಯಿಂದ ದುರಂತ ಸಂಭವಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವಶ್ಯವಿರುವ ಎಲ್ಲ ಸಹಕಾರವನ್ನೂ ನೀಡುವುದಾಗಿ ಮುಖ್ಯಮಂತ್ರಿ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ಅವರಿಗೆ ಅಭಯ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್‌ಡಿಎಂಎ) ಸಭೆ ನಡೆಸಿ ಪರಿಸ್ಥಿತಿಯ ಕುರಿತು ಸಮಾಲೋಚಿಸಿದ್ದಾರೆ.

ಕೇಂದ್ರ ಗೃಹ ಸಚಿವಾಲಯ ಹಾಗೂ ಎನ್‌ಡಿಎಂಎ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿರುವುದಾಗಿ ಪ್ರಧಾನಿ ಟ್ವೀಟಿಸಿದ್ದಾರೆ. ಪರಿಸ್ಥಿತಿಯ ಬಗ್ಗೆ ಚರ್ಚಿಸಿದ್ದು, 'ಸಮೀಪದಿಂದ ನಿಗಾವಹಿಸಲಾಗಿದೆ' ಎಂದಿದ್ದಾರೆ.

ADVERTISEMENT

'ವಿಶಾಖಪಟ್ಟಣದಲ್ಲಿ ಎಲ್ಲರ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ' ಎಂದು ಪ್ರಕಟಿಸಿದ್ದಾರೆ.

ಆಂಧ್ರ ಪ್ರದೇಶ ಮುಖ್ಯಮಂತ್ರಿಯೊಂದಿಗೆ ಪ್ರಧಾನಿ ಮಾತುಕತೆ ನಡೆಸಿ, ಎಲ್ಲ ರೀತಿಯ ಸಹಕಾರ ಹಾಗೂ ಸಹಾಯ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಟ್ವೀಟ್‌ ಮಾಡಿದೆ.

ಎನ್‌ಡಿಎಂಎ ಸಭೆಯ ಬಳಿಕ ಪ್ರಧಾನಿ ಮೋದಿ ಅವರ ಪ್ರಧಾನ ಕಾರ್ಯದರ್ಶಿ ಪಿ.ಕೆ.ಮಿಶ್ರಾ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ವಿಶಾಖಪಟ್ಟಣದ ಪರಿಸ್ಥಿತಿಯ ಪರಿಶೀಲನೆ ನಡೆಸಿದ್ದಾರೆ.

ಸಂಪುಟ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಎನ್‌ಡಿಎಂಎ, ಎನ್‌ಡಿಆರ್‌ಎಫ್‌, ಏಮ್ಸ್‌ ನಿರ್ದೇಶಕ ಹಾಗೂ ವೈದ್ಯಕೀಯ ತಜ್ಞರೊಂದಿಗೆ ಮಿಶ್ರಾ ಮಾತುಕತೆ ನಡೆಸಿ, ತಜ್ಞರ ತಂಡವನ್ನು ಸ್ಥಳಕ್ಕೆ ಕಳುಹಿಸಿದ್ದಾರೆ.

ಅನಿಲ ಸೋರಿಕೆಯಿಂದಾಗಿ ತಕ್ಷಣದಲ್ಲಿ ಹಾಗೂ ದೀರ್ಘಕಾಲದಲ್ಲಿ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ಗಮನಿಸುವಂತೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.