
ಸುಪ್ರೀಂ ಕೋರ್ಟ್
ನವದೆಹಲಿ: ‘ಮತದಾರರ ನೋಂದಣಾಧಿಕಾರಿಗಳಿಗೆ(ಇಆರ್‌ಒ) ಮತದಾರರೊಬ್ಬರ ಪೌರತ್ವ ನಿರ್ಧರಿಸುವ ಹಕ್ಕು ಇಲ್ಲ. ಹೀಗಾಗಿ, ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಹಲವು ನ್ಯೂನತೆಗಳಿಂದ ಕೂಡಿದೆ’ ಎಂದು ಸುಪ್ರೀಂ ಕೋರ್ಟ್‌ಗೆ ಗುರುವಾರ ಮಾಹಿತಿ ನೀಡಲಾಗಿದೆ.
ಎಸ್‌ಐಆರ್ ಪ್ರಶ್ನಿಸಿರುವ ಅರ್ಜಿದಾರರೊಬ್ಬರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್, ಈ ವಿಷಯ ತಿಳಿಸಿದ್ದಾರೆ.
‘ಎಸ್ಐಆರ್ ಪಾರದರ್ಶಕವಾಗಿ ನಡೆಯುತ್ತಿಲ್ಲ. ಪೌರತ್ವ ನಿರ್ಧರಿಸುವ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿ ಸ್ಪಷ್ಟತೆಯೂ ಇಲ್ಲ’ ಎಂದು ಮುಖ್ಯನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರು ಇದ್ದ ಪೀಠಕ್ಕೆ ಅವರು ತಿಳಿಸಿದ್ದಾರೆ.
ಹಲವು ತೀರ್ಪುಗಳನ್ನು ಉಲ್ಲೇಖಿಸಿದ ಭೂಷಣ್,‘ಪೌರತ್ವ ನಿರ್ಧರಿಸುವುದು ಇಆರ್‌ಒ ಅವರ ಕೆಲಸವಲ್ಲ. ಒಬ್ಬ ವ್ಯಕ್ತಿಯ ಪೌರತ್ವ ಕುರಿತು ಶಂಕೆ ಇದ್ದಲ್ಲಿ, ಆ ವಿಚಾರವನ್ನು ಸಂಬಂಧಿಸಿದ ಪ್ರಾಧಿಕಾರಗಳಿಗೆ ಅವರು ಶಿಫಾರಸು ಮಾಡಬೇಕಷ್ಟೆ’ ಎಂದು ವಾದಿಸಿದರು.
ವಾದಗಳನ್ನು ಆಲಿಸಿದ ಪೀಠವು ವಿಚಾರಣೆಯನ್ನು ಡಿಸೆಂಬರ್ 9ಕ್ಕೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.