ADVERTISEMENT

ಬಾಂಬ್‌ಗಿಂತ ವೋಟರ್‌ ಐಡಿ ಹೆಚ್ಚು ಪ್ರಭಾವಶಾಲಿ: ಪ್ರಧಾನಿ ಮೋದಿ

ಏಜೆನ್ಸೀಸ್
Published 23 ಏಪ್ರಿಲ್ 2019, 6:22 IST
Last Updated 23 ಏಪ್ರಿಲ್ 2019, 6:22 IST
ಗುಜರಾತ್‌ನ ಅಹಮದಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮತ ಚಲಾಯಿಸಿದರು
ಗುಜರಾತ್‌ನ ಅಹಮದಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮತ ಚಲಾಯಿಸಿದರು   

ಅಹಮದಾಬಾದ್: ‘ಐಇಡಿಗಿಂತಲೂ ಐಡಿ ಹೆಚ್ಚು ಪ್ರಭಾವಶಾಲಿ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಗುಜರಾತ್‌ನ ಅಹಮದಾಬಾದ್‌ನಲ್ಲಿ ಮತ ಚಲಾಯಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಮತ ಚಲಾಯಿಸುವುದಕ್ಕೂ ಮುನ್ನ ಪಕ್ಷದ ಅಭ್ಯರ್ಥಿಯೊಂದಿಗೆತೆರೆದ ಜೀಪ್‌ನಲ್ಲಿ ನಗರದ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

‘ಭಯೋತ್ಪಾದಕರ ಅಸ್ತ್ರ ಸುಧಾರಿತ ಸ್ಫೋಟಕಗಳು (ಐಡಿ), ಪ್ರಜಾಪ್ರಭುತ್ವದ ಶಕ್ತಿ ಚುನಾವಣಾ ಗುರುತು ಚೀಟಿ (ಐಡಿ). ಚುನಾವಣಾ ಆಯೋಗ ಕೊಟ್ಟಿರುವ ಐಡಿ, ಭಯೋತ್ಪಾದಕರಐಇಡಿಗಿಂತ ಹಲವು ಪಟ್ಟು ಹೆಚ್ಚು ಶಕ್ತಿಶಾಲಿ’ ಎಂದು ಘೋಷಿಸಿದರು. ರಾಷ್ಟ್ರೀಯ ಭದ್ರತೆಯನ್ನು ಚುನಾವಣಾ ವಿಷಯವನ್ನಾಗಿಸಿದ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯ ಈ ಹೇಳಿಕೆಗಳು ಮತದಾರರನ್ನು ಮತ್ತೆ ತಮ್ಮ ಪಕ್ಷದ ಮುಖ್ಯ ವಿಚಾರದತ್ತ ಸೆಳೆಯುವ ಉದ್ದೇಶ ಹೊಂದಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಗಾಂಧಿನಗರದಲ್ಲಿರುವ ತಮ್ಮ ತಾಯಿ ಹೀರಾಬೆನ್ ಅವರ ಆಶೀರ್ವಾದ ಪಡೆದುಕೊಂಡರು.

ಎಂದಿನಂತೆ ಬುಲೆಟ್‌ಪ್ರೂಫ್‌ ಕಾರಿನ ಬದಲು ತೆರೆದ ಜೀಪ್‌ನಲ್ಲಿ ಮೋದಿ ಮತಗಟ್ಟೆಗೆ ಬಂದರು. ಮಾರ್ಗದುದ್ದಕ್ಕೂ ಸೇರಿದ್ದ ಭಾರೀ ಸಂಖ್ಯೆ ಜನರತ್ತ ಕೈಬೀಸುತ್ತಾ ಮೋದಿ ನಿಧಾನವಾಗಿ ಸಾಗಿ ಬಂದರು. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮತ್ತು ಅವರ ಕುಟುಂಬದ ಸದಸ್ಯರು ಮೋದಿ ಅವರನ್ನು ಅಭಿನಂದಿಸಿದರು. ಜನರತ್ತ ಕೈಬೀಸುತ್ತಲೇ ಶಾ ಮೊಮ್ಮಗಳನ್ನು ಮೋದಿ ಎತ್ತಿಕೊಂಡುದು ಕಂಡುಬಂತು.

ADVERTISEMENT

ಮತ ಚಲಾಯಿಸಿದ ನಂತರ ಇಂಕ್ ಇದ್ದ ಬೆರಳನ್ನು ಹೆಮ್ಮೆಯಿಂದ ತೋರಿಸುತ್ತಾ,ಪಕ್ಷದ ಅಭ್ಯರ್ಥಿ ಹಂಸಮುಖ್‌ಭಾಯ್ ಸೋಮಭಾಯ್ ಪಟೇಲ್ ಅವರೊಂದಿಗೆಬೀದಿಗಳಲ್ಲಿ ಸಂಚರಿಸಿದರು. ಬಿಜೆಪಿಯ ಬಾವುಟ ಮತ್ತು ತೋರಣಗಳು ರಾರಾಜಿಸುತ್ತಿದ್ದವು.

‘ಮತ ಚಲಾಯಿಸುವಾಗ ನನಗೆಕುಂಭ ಮೇಳದ ಸಂದರ್ಭ ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡುವಭಾವ ಮೂಡುತ್ತದೆ. ನನ್ನ ತವರು ರಾಜ್ಯ ಗುಜರಾತ್‌ನಲ್ಲಿಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸಿದ್ದಕ್ಕೆ ಹೆಮ್ಮೆಯಿದೆ. ಜನರು ಬುದ್ಧಿವಂತರು. ಯಾವುದು ಒಳಿತು, ಯಾವುದು ಸರಿಯಿಲ್ಲ ಎಂಬುದು ಅವರಿಗೆ ಗೊತ್ತಿದೆ’ ಎಂದು ಮೋದಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಈ ವೇಳೆ ಸೇರಿದ್ದ ಜನರು ‘ಮೋದಿ ಮೋದಿ’ ಎಂದು ಗಟ್ಟಿಯಾಗಿ ಕೂಗುತ್ತಿದ್ದರು.

ಮತ ಚಲಾಯಿಸುವುದಕ್ಕೂ ಮೊದಲು ಟ್ವೀಟ್ ಮಾಡಿದ್ದ ಮೋದಿ, ‘3ನೇ ಹಂತದ ಮತದಾನ ಮಾಡಬೇಕಿರುವ ಎಲ್ಲರೂ ದಾಖಲೆ ಸಂಖ್ಯೆಯಲ್ಲಿ ಮತಗಟ್ಟೆಗಳತ್ತ ಬರಬೇಕು. ನಿಮ್ಮ ಮತ ಅಮೂಲ್ಯ. ನಮ್ಮ ದೇಶ ಸಾಗಬೇಕಿರುವ ಹಾದಿಯನ್ನು ಅದು ನಿರ್ಧರಿಸಲಿದೆ’ ಎಂದು ಹೇಳಿದ್ದರು.

ಗುಜರಾತ್‌ನಗಾಂಧಿ ನಗರದಲ್ಲಿ ವಾಸ ಮಾಡುತ್ತಿರುವ 98ರ ಹರೆಯದ ತಮ್ಮ ತಾಯಿ ಹೀರಾಬೆನ್ ಅವರನ್ನೂ ಮೋದಿ ಭೇಟಿಯಾಗಿ, ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.