ಮತದಾರರ ಪಟ್ಟಿ
– ಎ.ಐ ಚಿತ್ರ
ನವದೆಹಲಿ: ಕೇಂದ್ರ ಚುನಾವಣಾ ಆಯೋಗವು 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ನಡೆಸಿ, 3.67 ಕೋಟಿ ಮತದಾರರನ್ನು ಕೈಬಿಟ್ಟಿದೆ.
ಎರಡನೇ ಹಂತದಲ್ಲಿ ಎಸ್‌ಐಆರ್ ಪ್ರಕ್ರಿಯೆ ಕೈಗೊಂಡ ಮಧ್ಯಪ್ರದೇಶ, ಛತ್ತೀಸಗಢ, ಕೇರಳ ಹಾಗೂ ಅಂಡಮಾನ್ ಮತ್ತು ನಿಕೋಬಾರ್‌ನ ಕರಡು ಮತದಾರರ ಪಟ್ಟಿ ಮಂಗಳವಾರ ಪ್ರಕಟವಾಗಿದೆ. ಪಶ್ಚಿಮ ಬಂಗಾಳ, ರಾಜಸ್ಥಾನ, ಗೋವಾ, ಪುದುಚೇರಿ, ಲಕ್ಷದ್ವೀಪ, ಗುಜರಾತ್ ಮತ್ತು ತಮಿಳುನಾಡಿನ ಕರಡು ಪಟ್ಟಿಗಳನ್ನು ಆಯೋಗವು ಕಳೆದ ಹತ್ತು ದಿನಗಳಲ್ಲಿ ಬಿಡುಗಡೆ ಮಾಡಿದೆ.
ಇದರೊಂದಿಗೆ ಉತ್ತರ ಪ್ರದೇಶ ಹೊರತುಪಡಿಸಿ ಎರಡನೇ ಹಂತದಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಸಿದ ಎಂಟು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳ ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದಂತಾಗಿದೆ. ಉತ್ತರ ಪ್ರದೇಶದ ಕರಡು ಪಟ್ಟಿಯನ್ನು ಡಿಸೆಂಬರ್ 31ಕ್ಕೆ ಪ್ರಕಟಿಸಲಾಗುವುದು.
ಕರಡು ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆಯದೇ ಇರುವ ಅರ್ಹ ಮತದಾರರು ಸರಿಯಾದ ಅರ್ಜಿಗಳನ್ನು ಭರ್ತಿ ಮಾಡಿ, ದಾಖಲೆಗಳನ್ನು ಸಲ್ಲಿಸುವ ಮೂಲಕ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯುವ ಅವಕಾಶವಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಕರಡು ಪಟ್ಟಿ ಬಗ್ಗೆ ಆಕ್ಷೇಪಣೆ ಸಲ್ಲಿಕೆಗೆ ಜನವರಿ 22ರ ಗಡುವು ನೀಡಲಾಗಿದೆ.
ಮೊದಲ ಹಂತದ ಎಸ್‌ಐಆರ್ ಈ ವರ್ಷದ ಆರಂಭದಲ್ಲಿ ಬಿಹಾರದಲ್ಲಿ ನಡೆದಿತ್ತು. ಅಲ್ಲಿ 7.89 ಕೋಟಿ ಮತದಾರರ ಪೈಕಿ ಸುಮಾರು 65 ಲಕ್ಷ ಮತದಾರರನ್ನು ಕರಡು ಪಟ್ಟಿಯಿಂದ ಕೈಬಿಡಲಾಗಿತ್ತು. ಆ ಬಳಿಕ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸುವ ಅವಧಿಯಲ್ಲಿ ಸುಮಾರು ಮೂರು ಲಕ್ಷ ಮತದಾರರನ್ನು ಮತ್ತೆ ಪಟ್ಟಿಗೆ ಸೇರಿಸಲಾಗಿದೆ.
ಎರಡನೇ ಹಂತದ ಎಸ್‌ಐಆರ್ ನಡೆದ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಹಿಂದಿನ ಪಟ್ಟಿಯಲ್ಲಿ 35.52 ಕೋಟಿ ಮತದಾರರು ಇದ್ದರು. ಅದರಲ್ಲಿ 31.85 ಕೋಟಿ ಮತದಾರರು ಕರಡು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಆಯೋಗವು ಕೈಬಿಟ್ಟಿರುವ 3.67 ಕೋಟಿ ಮತದಾರರಲ್ಲಿ 99.81 ಲಕ್ಷ ಮಂದಿ ‘ಮೃತಪಟ್ಟವರು’ ಎಂದು ಹೇಳಿದೆ. 2.47 ಕೋಟಿ ಮತದಾರರು ಶಾಶ್ವತವಾಗಿ ಬೇರೆ ಕಡೆಗೆ ವಲಸೆ ಹೋಗಿದ್ದಾರೆ. ಒಂದಕ್ಕಿಂತ ಹೆಚ್ಚು ಕಡೆ ನೋಂದಾಯಿಸಿದ್ದಾರೆ ಎಂಬ ಕಾರಣಕ್ಕೆ 18.60 ಲಕ್ಷ ಮತದಾರರನ್ನು ಕೈಬಿಡಲಾಗಿದೆ.
ಎಸ್‌ಐಆರ್ 2ನೇ ಹಂತ
* ಮಧ್ಯ ಪ್ರದೇಶ, ಛತ್ತೀಸಗಢ, ಕೇರಳ, ಅಂಡಮಾನ್ ಮತ್ತು ನಿಕೋಬಾರ್, ಪಶ್ಚಿಮ ಬಂಗಾಳ, ರಾಜಸ್ಥಾನ, ಗೋವಾ, ಪುದುಚೇರಿ, ಲಕ್ಷದ್ವೀಪ, ಗುಜರಾತ್ ಮತ್ತು ತಮಿಳುನಾಡಿನ ಮತದಾರರ ಕರಡು ಪಟ್ಟಿ ಪ್ರಕಟ
* ಉತ್ತರ ಪ್ರದೇಶದ ಕರಡು ಮತದಾರರ ಪಟ್ಟಿ ಡಿ.31ಕ್ಕೆ ಪ್ರಕಟಗೊಳ್ಳಲಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.