
ನವದೆಹಲಿ: ಮತದಾರರ ಹೆಸರುಗಳನ್ನು ಪಟ್ಟಿಗೆ ಸೇರ್ಪಡೆ ಮಾಡುವುದು ಮತ್ತು ತೆಗೆದುಹಾಕುವುದು ಮತದಾರರ ಪಟ್ಟಿಯ ಪರಿಷ್ಕರಣೆಯ ಭಾಗವೇ ಆಗಿದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
‘ಪಟ್ಟಿಯಿಂದ ದೊಡ್ಡ ಸಂಖ್ಯೆಯಲ್ಲಿ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ’ ಎಂಬ ಅರ್ಜಿದಾರರ ಪರ ವಕೀಲರ ವಾದಕ್ಕೆ ಸುಪ್ರೀಂ ಕೋರ್ಟ್ ಈ ಪ್ರತಿಕ್ರಿಯೆ ನೀಡಿದೆ.
ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’(ಎಸ್‌ಐಆರ್) ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳ ಕುರಿತ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರು ಇದ್ದ ಪೀಠವು ನಡೆಸಿತು.
ಹಿರಿಯ ವಕೀಲರಾದ ಕಪಿಲ್ ಸಿಬಲ್, ಗೋಪಾಲ ಶಂಕರನಾರಾಯಣನ್, ಪ್ರಶಾಂತ್ ಭೂಷಣ್, ವಿಜಯ ಹನ್ಸಾರಿಯಾ ಹಾಗೂ ಸ್ವತಃ ಅರ್ಜಿದಾರರಾದ ಯೋಗೇಂದ್ರ ಯಾದವ್ ತಮ್ಮ ನಿವೇದನೆಗಳನ್ನು ಪೀಠಕ್ಕೆ ಅರುಹಿದರು.
ಎಸ್‌ಐಆರ್ ಕೈಗೊಂಡಿರುವ ಸಮಯ, ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹಾಗೂ ಇದರ ಕಾನೂನುಬದ್ಧತೆ ಬಗ್ಗೆ ಅರ್ಜಿದಾರರ ಪರ ವಕೀಲರು ತಮ್ಮ ವಾದಗಳನ್ನು ಮಂಡಿಸಿದರು.
ಪಟ್ಟಿಯಿಂದ ಮತದಾರರ ಹೆಸರುಗಳನ್ನು ಸೇರಿಸುವುದು ಮತ್ತು ಕೈಬಿಡುವುದು ಈ ಪರಿಷ್ಕರಣೆಯ ಭಾಗ ಎಂಬ ಪೀಠದ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಕಪಿಲ್ ಸಿಬಲ್,‘ಪ್ರತಿ ವರ್ಷ ಮತದಾರರ ಪಟ್ಟಿಯ ಪರಿಷ್ಕರಣೆ ಇದ್ದೇ ಇರುತ್ತದೆ. ಆದರೆ, ಈಗ ದೊಡ್ಡ ಪ್ರಮಾಣದಲ್ಲಿ ಪರಿಷ್ಕರಣೆ ನಡೆಸಲಾಗುತ್ತಿದೆ. ಈ ಕ್ರಮವನ್ನು ಸಮರ್ಥಿಸಲು ಸಮರ್ಪಕ ದತ್ತಾಂಶಗಳು ಅಗತ್ಯ’ ಎಂದರು.
‘ಆಧಾರ್ ಒಪ್ಪಬಹುದೇ?’: ಆಧಾರ್ ಸಂಖ್ಯೆಯನ್ನು ಮತದಾರರ ಗುರುತು ದೃಢೀಕರಣಕ್ಕೆ ದಾಖಲೆಯಾಗಿ ಪರಿಗಣಿಸಬಹುದೇ ಎಂಬ ಬಗ್ಗೆಯೂ ವಕೀಲರು ವಾದ ಮಂಡಿಸಿದರು.
‘ನಕಲಿ ಆಧಾರ್ ಕಾರ್ಡ್ ರೂಪಿಸಲಾಗುತ್ತದೆ ಎಂಬುದು ಅದನ್ನು ಪುರಾವೆಯಾಗಿ ಪರಿಗಣಿಸದೇ ಇರುವುದಕ್ಕೆ ಕಾರಣವಾಗದು’ ಎಂದು ಪೀಠ ಹೇಳಿತು.
‘ಪಾಸ್‌ಪೋರ್ಟ್‌ಗಳ ಪರಿಶೀಲನೆಯನ್ನು ಖಾಸಗಿ ಏಜೆನ್ಸಿಗಳೇ ಮಾಡುತ್ತವೆ. ಹಾಗಾಗಿ, ಯಾವುದೇ ಒಂದು ದಾಖಲೆಯನ್ನು ಕಾನೂನಿನಡಿ ಮಾನ್ಯ ಮಾಡಿದಾಗ, ಅದನ್ನು ಖಾಸಗಿ ಸಂಸ್ಥೆ ರೂಪಿಸುತ್ತಿದೆ ಎಂಬ ಕಾರಣ ನೀಡಿ ತಿರಸ್ಕರಿಸುವಂತಿಲ್ಲ’ ಎಂದೂ ಪೀಠ ಸ್ಪಷ್ಟಪಡಿಸಿತು.
ಎಸ್‌ಐಆರ್ ಪರ ವಾದ ಮಂಡಿಸಿದ ಹಿರಿಯ ವಕೀಲ ವಿಜಯ ಹನ್ಸಾರಿಯಾ, ‘ಆಧಾರ್ ಅನ್ನು ಪೌರತ್ವ ದೃಢೀಕರಿಸುವ ದಾಖಲೆ ಎಂಬುದಾಗಿ ಪರಿಗಣಿಸಬಾರದು’ ಎಂದು ಪೀಠಕ್ಕೆ ತಿಳಿಸಿದರು.
‘ಆಧಾರ್ ಕಾಯ್ದೆ ಪ್ರಕಾರ, ಭಾರತದಲ್ಲಿ 182 ದಿನ ವಾಸ ಮಾಡುವ ವಿದೇಶಿ ಪ್ರಜೆಗಳು ಕೂಡ ಆಧಾರ್‌ಗಾಗಿ ನೋಂದಣಿ ಮಾಡಿಸಬಹುದು. ಆದರೆ, ಆಧಾರ್ ಕಾರ್ಡ್ ಪೌರತ್ವದ ಹಕ್ಕನ್ನು ನೀಡುವುದಿಲ್ಲ’ ಎಂದರು.
ಆಗ,‘ನಾನು ಭಾರತದ ಪ್ರಜೆ ಎಂಬುದನ್ನು ಯಾರು ನಿರ್ಧರಿಸುವರು? ಇದನ್ನು ನಿರ್ಧರಿಸುವುದು ಭಾರತ ಸರ್ಕಾರವೇ ಹೊರತು ಚುನಾವಣಾ ಆಯೋಗ ಅಲ್ಲ’ ಎಂದು ಕಪಿಲ್ ಸಿಬಲ್ ಹೇಳಿದರು.
‘ಮತದಾರರ ನೋಂದಣಾಧಿಕಾರಿಗಳು(ಇಆರ್‌ಒ) ಮತದಾರರು ಸಲ್ಲಿಸುವ ಆಕ್ಷೇಪಣೆಗಳು ಹಾಗೂ ಹೆಸರು ತೆಗೆದು ಹಾಕುವ ಕುರಿತ ಅರ್ಜಿಗಳ ಪರಿಶೀಲನೆ ನಡೆಸಬಹುದಷ್ಟೆ. ಅವರು ಮತದಾರರೊಬ್ಬರ ಪೌರತ್ವ ನಿರ್ಧರಿಸಲಾರರು’ ಎಂದೂ ವಾದಿಸಿದರು.
ಎಸ್‌ಐಆರ್ ಸಾಧಾರಣವಾದ ಆಡಳಿತಾತ್ಮಕ ನಿರ್ಧಾರವಲ್ಲ. ಈ ಕುರಿತು ಸುಪ್ರೀಂ ಕೋರ್ಟ್ ನೀಡುವ ತೀರ್ಪು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಭವಿಷ್ಯವನ್ನು ನಿರ್ಧರಿಸಲಿದೆಕಪಿಲ್ ಸಿಬಲ್. ಹಿರಿಯ ವಕೀಲ
ವಿದ್ಯಾರ್ಥಿಗಳಿಗೆ ಅಂಚೆ ಮತಪತ್ರ ಸೌಲಭ್ಯ: ಅರ್ಜಿ ವಿಚಾರಣೆಗೆ ಒಪ್ಪಿಗೆ
ಅಂಚೆ ಮತಪತ್ರ ಬಳಸಿ ತಮ್ಮ ಹಕ್ಕು ಚಲಾವಣೆ ಮಾಡುವುದಕ್ಕೆ ವಿದ್ಯಾರ್ಥಿಗಳಿಗೆ ಅವಕಾಶ ನೀಡುವಂತೆ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಬುಧವಾರ ಸಮ್ಮತಿಸಿದೆ. ಈ ಕುರಿತ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ವಿಕ್ರಮ ನಾಥ್ ಸಂದೀಪ್ ಮೆಹ್ತಾ ಹಾಗೂ ಎನ್.ವಿ.ಅಂಜಾರಿಯಾ ಅವರು ಇದ್ದ ಪೀಠವು ತಿಂಗಳ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಹಾಗೂ ಆಯೋಗಕ್ಕೆ ನೋಟಿಸ್ ನೀಡಿತು. ತಮ್ಮ ತವರು ಕ್ಷೇತ್ರ ಬದಲಾಗಿ ಇತರೆಡೆ ಇರುವ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ನೀಡಬೇಕು ಎಂದು ಕೋರಿ ತಮಿಳುನಾಡು ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿ ಜಯಸುಧಾಕರ್ ಅರ್ಜಿ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.