ADVERTISEMENT

ಕರ್ನಾಟಕ ಸೇರಿ 3 ರಾಜ್ಯಗಳಲ್ಲಿ ರಣಹದ್ದು ಸಂಖ್ಯೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2025, 16:06 IST
Last Updated 4 ಏಪ್ರಿಲ್ 2025, 16:06 IST
ಸಣ್ಣ ಕೊಕ್ಕಿನ ರಣಹದ್ದು
ಸಣ್ಣ ಕೊಕ್ಕಿನ ರಣಹದ್ದು   

ಚೆನ್ನೈ: ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಏಳು ಹುಲಿ ಮೀಸಲು ಮತ್ತು ಅರಣ್ಯ ಪ್ರದೇಶಗಳಲ್ಲಿ ರಣಹದ್ದುಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಳವಾಗಿರುವುದು ಸಮೀಕ್ಷೆಯಲ್ಲಿ ಕಂಡುಬಂದಿದೆ.

ತೀರಾ ಅಳಿವಿನಂಚಿನಲ್ಲಿರುವ ಪಕ್ಷಿಗಳೆನಿಸಿರುವ ರಣಹದ್ದುಗಳ ಸಂಖ್ಯೆ 2023–24ರಲ್ಲಿ 320 ಇತ್ತು. ಈಗ ಇವುಗಳ ಸಂಖ್ಯೆ 390ಕ್ಕೆ ಏರಿಕೆಯಾಗಿದೆ ಎಂದು ಕ್ರೋಡೀಕೃತ ಸಮೀಕ್ಷೆ ಹೇಳಿದೆ.

ಕಳೆದ ಫೆಬ್ರುವರಿ 27 ಮತ್ತು 28ರಂದು ಕರ್ನಾಟಕದ ಬಂಡೀಪುರ ಹುಲಿ ಮೀಸಲು ಅರಣ್ಯ, ಬಿಆರ್‌ಟಿ ಹುಲಿ ಮೀಸಲು ಅರಣ್ಯ ಮತ್ತು ನಾಗರಹೊಳೆ ಹುಲಿ ಮೀಸಲು ಅರಣ್ಯ, ತಮಿಳುನಾಡಿನ ಮುದುಮಲೈ ಹುಲಿ ಮೀಸಲು ಅರಣ್ಯ, ಸತ್ಯಮಂಗಲದ ಹುಲಿ ಮೀಸಲು ಅರಣ್ಯ ಮತ್ತು ನೆಲ್ಲೈ ಅರಣ್ಯ ವಿಭಾಗ, ಕೇರಳದ ವಯನಾಡ್ ವನ್ಯಜೀವಿ ಅಭಯಾರಣ್ಯದಲ್ಲಿ ರಣಹದ್ದುಗಳ ಸಮೀಕ್ಷೆ ನಡೆಸಲಾಗಿದೆ.

ADVERTISEMENT

ಗಣತಿ ವೇಳೆ, ಉದ್ದ ಕೊಕ್ಕಿನ ರಣಹದ್ದು, ಕೆಂಪುತಲೆಯ ರಣಹದ್ದು, ಈಜಿಪ್ಟಿನ ರಣಹದ್ದು, ಬಿಳಿ ಪುಕ್ಕದ ರಣಹದ್ದು ಹೀಗೆ ಐದು ಪ್ರಭೇದಗಳನ್ನು ದಾಖಲಿಸಿದೆ. ತಮಿಳುನಾಡಿನಲ್ಲಿ ಒಟ್ಟು 157 ರಣಹದ್ದುಗಳು ಕಂಡುಬಂದಿವೆ. ಇವುಗಳಲ್ಲಿ ಬಿಳಿ ಪುಕ್ಕದ ರಣಹದ್ದು ಅತ್ಯಂತ ಹೇರಳವಾಗಿರುವ ಪಕ್ಷಿ ಪ್ರಭೇದವಾಗಿದ್ದು, ಈ ಪ್ರಭೇದದ 110, ಉದ್ದ ಕೊಕ್ಕಿನ 31, ಕೆಂಪುತಲೆಯ 11 ಹಾಗೂ 5 ಈಜಿಪ್ಟ್‌ ರಣಹದ್ದುಗಳು ರಾಜ್ಯದ ಅಭಯಾರಣ್ಯಗಳಲ್ಲಿ ಕಂಡುಬಂದಿವೆ.

ಮುದುಮಲೈ ಹುಲಿ ಮೀಸಲು ಅರಣ್ಯದಲ್ಲಿ 119, ಸತ್ಯಮಂಗಲದಲ್ಲಿ 33, ಬಂಡಿಪುರದಲ್ಲಿ 77, ಬಿಆರ್‌ಟಿಯಲ್ಲಿ 8, ನಾಗರಹೊಳೆಯಲ್ಲಿ 23, ವಯನಾಡ್‌ನಲ್ಲಿ 125 ಹಾಗೂ ನೆಲ್ಲೈನಲ್ಲಿ 5 ರಣಹದ್ದುಗಳು ಕಂಡುಬಂದಿವೆ.

ಮುದುಮಲೈ ಹುಲಿ ಮೀಸಲು ಅರಣ್ಯವು ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕೆಂಪು ತಲೆಯ ರಣಹದ್ದು ಗೂಡುಗಳನ್ನು ಹೊಂದಿರುವ, ರಣಹದ್ದುಗಳ ಗಮನಾರ್ಹ ಸಂಖ್ಯೆಯ ಸಂತಾನೋತ್ಪತ್ತಿಯ ನೆಲೆಯಾಗಿದೆ. ಇಲ್ಲಿ 60 ಸಕ್ರಿಯ ಗೂಡುಗಳನ್ನು ಹೊಂದಿರುವ 8 ಜಾಗಗಳಿವೆ. 120 ರಣಹದ್ದುಗಳಿರುವ ಅಂದಾಜು ಇದೆ ಎಂದು ಸಮೀಕ್ಷೆ ಹೇಳಿದೆ.

ಸಂರಕ್ಷಣೆಯ ಪ್ರಯತ್ನಗಳಿಂದಾಗಿ ಅಳಿವಿನ ಅಂಚಿನ ರಣಹದ್ದು ಪ್ರಭೇದಗಳು ಮತ್ತೊಮ್ಮೆ ಏರಿಕೆ ಕಾಣಿಸುತ್ತಿವೆ
–ಸುಪ್ರಿಯಾ ಸಾಹು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಪರಿಸರ ಮತ್ತು ಅರಣ್ಯ) ತಮಿಳುನಾಡು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.