ADVERTISEMENT

ಸತ್ತ ಅಜ್ಜನನ್ನು ಎಚ್ಚರಿಸಲು ಪ್ರಯತ್ನಿಸಿದ ಬಾಲಕ

ಗುಂಡಿನ ದಾಳಿಯ ಸಂದರ್ಭದ ಮನಕಲಕುವ ಚಿತ್ರಗಳು

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 11:36 IST
Last Updated 1 ಜುಲೈ 2020, 11:36 IST
ಚಿತ್ರಕೃಪೆ: twitter.com/kashmirpolice
ಚಿತ್ರಕೃಪೆ: twitter.com/kashmirpolice   

ಶ್ರೀನಗರ: ಇಲ್ಲಿನ ಸೊಪೊರದಲ್ಲಿ ಬುಧವಾರ ಉಗ್ರರು ಹಾಗೂ ರಕ್ಷಣಾಪಡೆಯ ಸಿಬ್ಬಂದಿ ನಡುವೆ ನಡೆದ ಗುಂಡಿನ ಚಕಮಕಿಯ ಸಂದರ್ಭದ ಎರಡು ಚಿತ್ರಣಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.

ಘಟನೆಯಲ್ಲಿ ಪವಾಡಸದೃಶವಾಗಿ ಪಾರಾಗಿರುವ ಮೂರು ವರ್ಷದ ಮಗುವೊಂದು, ಗುಂಡು ತಗುಲಿ ಮೃತಪಟ್ಟ ತನ್ನ ಅಜ್ಜನ ರಕ್ತಸಿಕ್ತವಾಗಿದ್ದ ದೇಹದ ಮೇಲೆ ಕುಳಿತು, ‘ಎದ್ದೇಳಿ ಅಜ್ಜಾ’ ಎಂದು ಹೇಳುತ್ತಿರುವ ದೃಶ್ಯದ ವಿಡಿಯೊ ವೈರಲ್‌ ಆಗಿದೆ. ಅಜ್ಜ ಸತ್ತಿದ್ದಾರೆ ಎಂಬ ವಾಸ್ತವವನ್ನು ಅರಿಯದ ಬಾಲಕನು ಅವರನ್ನು ಎಚ್ಚರಿಸಲು ಪ್ರಯತ್ನಿಸುತ್ತಿದ್ದ ಸನ್ನಿವೇಶವು ಮನಕಲಕುವಂತಿದೆ.

ಸತ್ತುಬಿದ್ದ ಅಜ್ಜನ ಮೇಲೆ ಕುಳಿತಿದ್ದ ಬಾಲಕನನ್ನು, ತನ್ನತ್ತ ಬರುವಂತೆ ರಕ್ಷಣಾ ಸಿಬ್ಬಂದಿಯೊಬ್ಬರು ಕೈಸನ್ನೆಯಲ್ಲಿ ಕರೆಯುತ್ತಿರುವ ಸಂದರ್ಭದ ಚಿತ್ರವೂ ವೈರಲ್‌ ಆಗಿದೆ.

ADVERTISEMENT

ಈ ಮಗುವನ್ನು ರಕ್ಷಿಸಿದ ಕಾಶ್ಮೀರ ಪೊಲೀಸರು, ‘ಉಗ್ರರ ಗುಂಡಿನ ದಾಳಿಯಿಂದ ಮೂರು ವರ್ಷದ ಬಾಲಕನನ್ನು ರಕ್ಷಿಸಲಾಗಿದೆ’ ಎಂದು ಬಾಲಕನ ಚಿತ್ರಸಹಿತವಾಗಿ ಟ್ವೀಟ್‌ ಮಾಡಿದ್ದಾರೆ.

ಬಾಲಕನನ್ನು ತಮ್ಮ ವಾಹನದಲ್ಲಿ ಕೂರಿಸಿದ ಪೊಲೀಸರು ಆತನನ್ನು ಸಮಾಧಾನಪಡಿಸಲು ಚಾಕಲೇಟ್‌ ಹಾಗೂ ಬಿಸ್ಕೆಟ್‌ಗಳನ್ನು ನೀಡಿದ್ದರು. ಆ ಸಂದರ್ಭದಲ್ಲಿ ಬಾಲಕ, ‘ನಾನು ಮನೆಗೆ ಹೋಗಬೇಕು’ ಎಂದು ಹೇಳುತ್ತಿರುವ ದೃಶ್ಯವೂ ವಿಡಿಯೊದಲ್ಲಿದೆ.

ಶ್ರೀನಗರದ ನಿವಾಸಿ, ಗುತ್ತಿಗೆದಾರರಾಗಿರುವ ಬಶೀರ್‌ ಅಹಮದ್‌ ಖಾನ್‌ (65) ಸೊಪೊರದಲ್ಲಿ ಕೈಗೆತ್ತಿಕೊಂಡಿದ್ದ ಕಾಮಗಾರಿಯ ಪ್ರಗತಿ ಪರಿಶೀಲನೆಗೆ ಮೊಮ್ಮಗ ಅಯಾದ್‌ ಜತೆಯಲ್ಲಿ ಹೋಗುತ್ತಿದ್ದಾಗ ಈ ದಾಳಿ ನಡೆದಿತ್ತು.

‘ತಂದೆಯನ್ನು ತಮ್ಮ ವಾಹನದಿಂದ ಹೊರಗೆ ಎಳೆದು ಗುಂಡಿಟ್ಟು ಹತ್ಯೆ ಮಾಡಲಾಗಿದೆ’ ಎಂದು ಬಶೀರ್‌ ಅಹಮದ್‌ ಅವರ ಪುತ್ರ ಆರೋಪಿಸಿದ್ದಾರೆ.

ಇದನ್ನು ನಿರಾಕರಿಸಿರುವ ಪೊಲೀಸರು, ಗುಂಡಿನ ದಾಳಿ ನಡೆದಾಗ ಖಾನ್‌ ಅವರು ತಮ್ಮ ಮೊಮ್ಮಗನ ರಕ್ಷಣೆಗೆ ಮುಂದಾದರು. ಈ ಸಂದರ್ಭದಲ್ಲಿ ಅವರಿಗೆ ಗುಂಡು ತಗುಲಿದೆ. ಗುಂಡಿನ ಚಕಮಕಿ ನಡೆದಾಗ ಹಲವು ವಾಹನಗಳು ಸಿಲುಕಿಕೊಂಡಿದ್ದವು. ಅವುಗಳಲ್ಲಿದ್ದ ಜನರು ವಾಹನವನ್ನು ಬಿಟ್ಟು ಹಿಂದಕ್ಕೆ ಓಡಿದರು. ದುರದೃಷ್ಟವಶಾತ್‌ ಖಾನ್‌ ಅವರಿಗೆ ಗುಂಡು ತಗುಲಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.