ADVERTISEMENT

ಭಾರಿ ಮಳೆಗೆ ಹರಿದ್ವಾರದ ಹರ್‌ ಕಿ ಪೌರಿ ಸಮೀಪದ ತಡೆಗೋಡೆ ಕುಸಿತ

ಉತ್ತರಾಖಂಡದಲ್ಲಿ ಭಾರಿ ಮಳೆ: ಐವರು ಸಾವು

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 11:55 IST
Last Updated 21 ಜುಲೈ 2020, 11:55 IST
ಹರಿದ್ವಾರದಲ್ಲಿರುವ ಗಂಗಾ ನದಿಯ ದಡದಲ್ಲಿ ಹರ್ ಕಿ ಪೌರಿ ಘಾಟ್ ಬಳಿ ಮಳೆಯಿಂದಾಗಿ ತಡೆಗೋಡೆ ಕುಸಿದು ಬಿದ್ದಿದೆ. –ಪಿಟಿಐ ಚಿತ್ರ
ಹರಿದ್ವಾರದಲ್ಲಿರುವ ಗಂಗಾ ನದಿಯ ದಡದಲ್ಲಿ ಹರ್ ಕಿ ಪೌರಿ ಘಾಟ್ ಬಳಿ ಮಳೆಯಿಂದಾಗಿ ತಡೆಗೋಡೆ ಕುಸಿದು ಬಿದ್ದಿದೆ. –ಪಿಟಿಐ ಚಿತ್ರ   

ಲಖನೌ: ಉತ್ತರಾಖಂಡದ ಹರಿದ್ವಾರ ಪಟ್ಟಣದಲ್ಲಿ ಸೋಮವಾರ ರಾತ್ರಿ ಭಾರಿ ಗುಡುಗು–ಸಿಡಿಲಿನಿಂದಾಗಿ ಗಂಗಾ ನದಿ ದಡದ ‍ಪ್ರಸಿದ್ಧ ಘಾಟ್ ಹರ್‌–ಕಿ–ಪೌರಿ ಸಮೀಪದ 80 ಅಡಿ ಎತ್ತರದ ತಡೆಗೋಡೆ ಕುಸಿದಿದೆ.

ಘಾಟ್ ಸಮೀಪದ ಬ್ರಹ್ಮಕುಂಡ ಬಳಿಯ ಟ್ರಾನ್ಸ್‌ಫಾರ್ಮರ್ ಸಿಡಿಲಿನಿಂದಾಗಿ ಸಂಪೂರ್ಣವಾಗಿ ಹಾನಿಗೀಡಾಗಿದೆ. ಘಟನೆಯಲ್ಲಿ ಯಾರಿಗೂ ಪ್ರಾಣಹಾನಿಯಾಗಿಲ್ಲ. ದುರಸ್ತಿ ಕಾರ್ಯಗಳು ವೇಗವಾಗಿ ನಡೆಯುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಐವರು ಸಾವು: ಉತ್ತರಾಖಂಡದಾದ್ಯಂತ ಭಾರಿ ಮಳೆಯಾಗಿದ್ದು, ಕುಮಾನ್ ಪ್ರದೇಶದಲ್ಲಿ ಐದು ಮಂದಿ ಸಾವಿಗೀಡಾಗಿದ್ದಾರೆ. ಮಳೆಯಿಂದಾಗಿ ಅನೇಕ ಮನೆಗಳು ಹಾನಿಗೀಡಾಗಿವೆ.

ADVERTISEMENT

ಪಿಥೋರ್‌ಗಡ್‌ ಜಿಲ್ಲೆಯಲ್ಲಿ ಮೇಘ ಸ್ಫೋಟದಿಂದಾಗಿ ಭಾರಿ ಮಳೆಯಾಗಿದೆ. ಮಳೆನೀರಿನ ಜೊತೆಗೆ ಬೆಟ್ಟದ ಪ್ರದೇಶಗಳಲ್ಲಿನ ಕಲ್ಲು ಮತ್ತು ಮಣ್ಣು ಮನೆಯೊಳಗೆ ನುಗ್ಗಿದ್ದರಿಂದ ಐವರು ಸಾವಿಗೀಡಾಗಿದ್ದಾರೆ. ಕುಸಿದ ಮನೆಗಳ ಅವಶೇಷಗಳ ಅಡಿಯಿಂದ ಇದುವರೆಗೆ ಮೂವರ ಶವಗಳನ್ನು ಹೊರತೆಗೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಲಾ ಮತ್ತು ಗೈಲಾ ಗ್ರಾಮಗಳಲ್ಲಿ 11 ಮಂದಿ ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಭಾರಿ ಮಳೆಯಿಂದಾಗಿ ಉಂಟಾದ ಭೂಕುಸಿತದಿಂದ ಮುನ್ಸಿಯಾರಿ, ಬಂಗಾಪಾನಿ ಮತ್ತು ಇತರ ಸ್ಥಳಗಳಲ್ಲಿ ರಸ್ತೆಗಳು ಹಾನಿಗೀಡಾಗಿದ್ದು, ಸಂಚಾರ ಬಂದ್ ಆಗಿದೆ. ಇದರಿಂದಾಗಿ ಹನ್ನೆರಡಕ್ಕೂ ಹೆಚ್ಚು ಗ್ರಾಮಗಳಿಗೆ ಜಿಲ್ಲಾ ಕೇಂದ್ರದಿಂದ ಸಂಪರ್ಕ ಕಡಿತಗೊಂಡಿದೆ.

ಪ್ರವಾಹಪೀಡಿತ ಗ್ರಾಮಗಳಿಗೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.