ADVERTISEMENT

Waqf Amendment Bill: ವಕ್ಫ್‌ ತಿದ್ದುಪಡಿ ಮಸೂದೆಗೆ ವೈ.ಎಸ್‌.ಶರ್ಮಿಳಾ ವಿರೋಧ

ಪಿಟಿಐ
Published 2 ಏಪ್ರಿಲ್ 2025, 5:14 IST
Last Updated 2 ಏಪ್ರಿಲ್ 2025, 5:14 IST
<div class="paragraphs"><p>ವೈ.ಎಸ್‌.ಶರ್ಮಿಳಾ</p></div>

ವೈ.ಎಸ್‌.ಶರ್ಮಿಳಾ

   

ಚಿತ್ರ: ಎಕ್ಸ್‌

ವಿಜಯವಾಡ: ವಕ್ಫ್‌ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿರುವ ಆಂಧ್ರ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷೆ ವೈ.ಎಸ್‌.ಶರ್ಮಿಳಾ, ಮಸೂದೆಯು ಮುಸ್ಲಿಮರಿಗೆ ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿಯುವ ಉದ್ದೇಶ ಹೊಂದಿದೆ ಎಂದಿದ್ದಾರೆ.

ADVERTISEMENT

ಈ ಬಗ್ಗೆ ಅವರು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

‘ಸಂಸತ್ತಿನ ಮುಂದೆ ತಿದ್ದುಪಡಿ ಮಸೂದೆ ಬರುತ್ತಿರುವುದು ದೇಶಕ್ಕೆ ಕರಾಳ ದಿನವಾಗಿದೆ. ಇದೊಂದು ಸಂವಿಧಾನ ವಿರೋಧಿ ಮಸೂದೆಯಾಗಿದ್ದು, ಧಾರ್ಮಿಕ ದ್ವೇಷವನ್ನು ಪ್ರಚೋದಿಸುವ ಸಾಧನವಾಗಿ ಬಳಸಲಾಗುತ್ತಿದೆ. ಅಲ್ಪಸಂಖ್ಯಾತರ ಹಕ್ಕುಗಳನ್ನು ಹತ್ತಿಕ್ಕುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಸೂಚಿಯ ಭಾಗವಾಗಿದೆ’ ಎಂದು ಕಿಡಿಕಾರಿದ್ದಾರೆ.

‘ದೇಶದ ಸುಮಾರು 20 ಕೋಟಿ ಮುಸ್ಲಿಮರು ವಕ್ಫ್ ತಿದ್ದುಪಡಿ ವಿಧೇಯಕ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವಾಗ ಅವರ ಅಹವಾಲು ಆಲಿಸದೆ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಿರುವುದು ಪ್ರಜಾಪ್ರಭುತ್ವಕ್ಕೆ ಎಸಗಿದ ದೇಶದ್ರೋಹ. ಅವರ ಅಸಮಾಧಾನವನ್ನು ಪರಿಗಣಿಸದಿರುವುದು ಮೋದಿಯವರ ಸರ್ವಾಧಿಕಾರಿ ಧೋರಣೆಗೆ ಸಾಕ್ಷಿಯಾಗಿದೆ’ ಎಂದು ಹೇಳಿದ್ದಾರೆ.

‘ವಕ್ಫ್ ಆಸ್ತಿಗಳ ಉಸ್ತುವಾರಿಯನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸುವುದು, ವಕ್ಫ್ ಮಂಡಳಿಯಲ್ಲಿ ಅನ್ಯಧರ್ಮೀಯ ಸದಸ್ಯರನ್ನು ನೇಮಿಸುವುದು, 12 ವರ್ಷಗಳಿಂದ ವಕ್ಫ್ ಆಸ್ತಿಗಳು ಯಾರ ಹಿಡಿತದಲ್ಲಿವೆ ಎಂದು ಹೇಳುವುದು, 300 ವರ್ಷಗಳ ಹಿಂದಿನ ಆಸ್ತಿಗಳಿಗೆ ದಾಖಲೆಗಳನ್ನು ಕೇಳುವುದು ನಿಜಕ್ಕೂ ದುಃಖಕರವಾಗಿದೆ’ ಎಂದಿದ್ದಾರೆ.

‘ಅಲ್ಪಸಂಖ್ಯಾತರ ಹಿತಾಸಕ್ತಿಗೆ ಧಕ್ಕೆ ತರುವ ಮಸೂದೆಗೆ ಟಿಡಿಪಿ ಮತ್ತು ಜನಸೇನಾ ಪಕ್ಷಗಳು ಬೆಂಬಲ ವ್ಯಕ್ತಪಡಿಸಿರುವುದು ನಿಜಕ್ಕೂ ಕುಚೋದ್ಯ. ಟಿಡಿಪಿ ತನ್ನ ‘ಜಾತ್ಯತೀತ’ ಮುಸುಕನ್ನು ತೆಗೆದುಹಾಕಿದೆ. ಮುಸ್ಲಿಮರಿಗೆ ಇಫ್ತಾರ್ ಕೂಟ ಏರ್ಪಡಿಸಿ ವಕ್ಫ್ ಆಸ್ತಿಗಳನ್ನು ರಕ್ಷಿಸುವ ಭರವಸೆ ನೀಡಿ ಮತ್ತೊಂದೆಡೆ ಸಂಸತ್ತಿನಲ್ಲಿ ತಿದ್ದುಪಡಿ ಮಸೂದೆಗೆ ಬೆಂಬಲ ನೀಡುತ್ತಿರುವುದು ಘೋರ ವಂಚನೆಯಾಗಿದೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಈ ಮಸೂದೆಯನ್ನು ಕಾಂಗ್ರೆಸ್‌ ಬಲವಾಗಿ ವಿರೋಧಿಸುತ್ತಿದ್ದು, ಮುಸ್ಲಿಮರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಕೊನೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.