ನವದೆಹಲಿ: ವಕ್ಫ್ (ತಿದ್ದುಪಡಿ) ಮಸೂದೆಗೆ ಸಂಸತ್ತಿನ ಜಂಟಿ ಸಮಿತಿ (ಜೆಪಿಸಿ) ಪ್ರಸ್ತಾಪಿಸಿರುವ ತಿದ್ದುಪಡಿಗಳಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಬಜೆಟ್ ಅಧಿವೇಶನದ ದ್ವಿತೀಯಾರ್ಧದಲ್ಲಿ ಸಂಸತ್ತಿನಲ್ಲಿ ಮಂಡನೆಯಾಗುವ ಸಾಧ್ಯತೆಗಳಿವೆ.
ಸಮಿತಿ ಪ್ರಸ್ತಾಪಿಸಿರುವ 14 ತಿದ್ದುಪಡಿಗಳಿಗೆ ಸಂಪುಟವು ಫೆಬ್ರುವರಿ 19ರಂದು ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿಯ ಸಂಸದರಾದ ಜಗದಾಂಬಿಕಾ ಪಾಲ್ ನೇತೃತ್ವದ ಸಮಿತಿಯು ಫೆ.13ರಂದು ಸಂಸತ್ತಿನಲ್ಲಿ ಕೋಲಾಹಲದ ನಡುವೆಯೂ ತನ್ನ ವರದಿಯನ್ನು ಮಂಡಿಸಿತ್ತು. ಈ ವೇಳೆ ವಿರೋಧ ಪಕ್ಷಗಳು ಸಭಾತ್ಯಾಗ ಮಾಡಿದ್ದವು.
ವಕ್ಫ್ ಆಸ್ತಿಗಳ ದುರುಪಯೋಗ ತಡೆಯುವುದು ಮತ್ತು ಅವುಗಳ ನೋಂದಣಿಯನ್ನು ವ್ಯವಸ್ಥಿತಗೊಳಿಸುವ ಪ್ರಮುಖ ಉದ್ದೇಶವನ್ನು ಈ ಮಸೂದೆ ಒಳಗೊಂಡಿದೆ.
ಅಧಿವೇಶನದ ಎರಡನೇ ಹಂತವು ಮಾರ್ಚ್ 10ರಿಂದ ಏಪ್ರಿಲ್ 4ರವರೆಗೆ ನಡೆಯಲಿದ್ದು, ಈ ವೇಳೆ ವಕ್ಫ್ (ತಿದ್ದುಪಡಿ) ಮಸೂದೆ ಸಂಸತ್ತಿನ ಮುಂದೆ ಬರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಇದೇ ಅಧಿವೇಶನದಲ್ಲಿ ಮಸೂದೆ ಅಂಗೀಕಾರ ಆಗುವ ಸಾಧ್ಯತೆಯಿದೆ ಎಂದು ಬಿಜೆಪಿಯ ಹಲವು ಹಿರಿಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
31 ಸದಸ್ಯರ ಜಂಟಿ ಸಂಸದೀಯ ಸಮಿತಿಯು ಹಲವು ಸಭೆ, ವಿಚಾರಣೆಗಳ ಬಳಿಕ ಉದ್ದೇಶಿತ ಮಸೂದೆಗೆ ಹಲವು ತಿದ್ದುಪಡಿಗಳನ್ನು ಪ್ರಸ್ತಾಪಿಸಿದೆ. ಸಮಿತಿಯ ವಿರೋಧ ಪಕ್ಷಗಳ ಸದಸ್ಯರು ಈ ತಿದ್ದುಪಡಿಗಳಿಗೆ ತಮ್ಮ ವಿರೋಧ ಮತ್ತು ಅಸಮ್ಮತಿಯನ್ನು ದಾಖಲಿಸಿದ್ದಾರೆ.
ಜೆಪಿಸಿ 15-11ರ ಬಹುಮತದಿಂದ ವರದಿಯನ್ನು ಅಂಗೀಕರಿಸಿತ್ತು. ಈ ವೇಳೆ ವಿರೋಧ ಪಕ್ಷಗಳು ಇದು ವಕ್ಫ್ ಮಂಡಳಿಯನ್ನು ನಾಶಪಡಿಸುವ ಕಸರತ್ತು ಎಂದು ಕಿಡಿಕಾರಿದ್ದವು. ಸಮಿತಿಯು 655 ಪುಟಗಳ ವರದಿಯನ್ನು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಜನವರಿ 30ರಂದು ಸಲ್ಲಿಸಿತ್ತು.
ಲೋಕಸಭೆಯಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಂಡಿಸಿದ ಮಸೂದೆಯನ್ನು ಆಗಸ್ಟ್ 8ರಂದು ಪರಿಶೀಲನೆಗಾಗಿ ಜೆಪಿಸಿಗೆ ಕಳುಹಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.