ನವದೆಹಲಿ: ಈಗಿನ ವಕ್ಫ್ ಆಸ್ತಿಗಳ ವಿಚಾರವಾಗಿ ಯಾವುದೇ ತಕರಾರು ಇಲ್ಲ ಎಂದಾದರೆ, ವಕ್ಫ್ ಆಸ್ತಿಯಲ್ಲಿ ಸರ್ಕಾರದ ಯಾವುದೇ ಕಟ್ಟಡ ಇಲ್ಲವೆಂದಾದರೆ ಅಂತಹ ಆಸ್ತಿಗಳನ್ನು ವಕ್ಫ್ ಆಸ್ತಿಗಳನ್ನಾಗಿಯೇ ಉಳಿಸಿಕೊಳ್ಳಬೇಕು ಎಂದು ವಕ್ಫ್ ಮಸೂದೆ ಕುರಿತು ಪರಿಶೀಲನೆ ನಡೆಸಿರುವ ಸಂಸದೀಯ ಸಮಿತಿಯು ಶಿಫಾರಸು ಮಾಡಲಿದೆ.
ಆದರೆ, ಇಂತಹ ವಕ್ಫ್ ಆಸ್ತಿಗಳನ್ನು ಹೊಸ ಕಾನೂನು ಜಾರಿಗೆ ಬರುವ ಮೊದಲು ನೋಂದಾಯಿಸಬೇಕು ಎಂಬ ಅಂಶವು ಸಮಿತಿಯ ಶಿಫಾರಸಿನಲ್ಲಿ ಇರಲಿದೆ.
ಸಮಿತಿಯು ಒಪ್ಪಿಕೊಂಡಿರುವ ತಿದ್ದುಪಡಿಗಳು ಕೆಲವು ಮುಸ್ಲಿಂ ಸಂಘಟನೆಗಳ ಆಗ್ರಹಕ್ಕೆ ಪೂರಕವಾಗಿ ಇವೆ. ಆದರೆ, ಕೆಲವು ತಿದ್ದುಪಡಿಗಳು ಮಸೂದೆಯ ಟೀಕಾಕಾರರಲ್ಲಿ ಇನ್ನಷ್ಟು ಅಸಮಾಧಾನ ಮೂಡಿಸುವಂತೆ ಇವೆ ಎಂದು ಹೇಳಲಾಗಿದೆ. ವಿಧವೆಯರು ಹಾಗೂ ಅನಾಥ ಮಕ್ಕಳ ಅಭಿವೃದ್ಧಿಗೆ ಕೈಗೊಳ್ಳಬೇಕಿರುವ ಕ್ರಮಗಳು ಯಾವುವು ಎಂಬುದನ್ನು ಕಾನೂನಿನ ಮೂಲಕ ಹೇಳುವ ಬದಲು, ಅವುಗಳನ್ನು ವಕ್ಫ್ ಮಂಡಳಿಗಳ ವಿವೇಚನೆಗೆ ಬಿಡುವ ತಿದ್ದುಪಡಿಯನ್ನು ಸಮಿತಿಯು ಒಪ್ಪಿದೆ.
ಮಸೂದೆಯ ಅಷ್ಟೂ (ಅಂದರೆ 44) ಕಲುಮಗಳಲ್ಲಿ ತಿದ್ದುಪಡಿ ಆಗಬೇಕು, ಈಗಿರುವ ಕಾನೂನಿನ ಅಂಶಗಳನ್ನು ಹೊಸ ಮಸೂದೆಯಲ್ಲಿ ಉಳಿಸಿಕೊಳ್ಳಬೇಕು ಎಂದು ವಿರೋಧ ಪಕ್ಷಗಳ ಸದಸ್ಯರು ಹೇಳಿದರು. ಸಮಿತಿಯು ತನ್ನ ವರದಿಯಲ್ಲಿ ಹೇಳುವ ಸ್ವರೂಪದ ಮಸೂದೆಯಲ್ಲಿ ಕರಾಳ ಅಂಶಗಳೆಲ್ಲವೂ ಉಳಿದುಕೊಳ್ಳುತ್ತವೆ ಎಂದು ಅವರು ವಾದಿಸಿದರು ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ ನೇತೃತ್ವದಲ್ಲಿ ನಡೆದ ಸಮಿತಿಯ ಸಭೆಯು ಸೋಮವಾರವೂ ಗದ್ದಲಮಯವಾಗಿತ್ತು. ಪಾಲ್ ಅವರು ಪ್ರಜಾತಾಂತ್ರಿಕ ಪ್ರಕ್ರಿಯೆಗಳನ್ನು ಬುಡಮೇಲು ಮಾಡಿದ್ದಾರೆ ಎಂದು ವಿರೋಧ ಪಕ್ಷಗಳ ಸದಸ್ಯರು ದೂರಿದರು.
ಸಮಿತಿಯು ತನ್ನ ವರದಿಯನ್ನು ಬುಧವಾರ ಅಂಗೀಕರಿಸಲಿದೆ. ವಿರೋಧ ಪಕ್ಷಗಳಾದ ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಎಐಎಂಐಎಂ ಸದಸ್ಯರು ತಮ್ಮ ವಿರೋಧವನ್ನು ದಾಖಲಿಸುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.
ಸಂಸತ್ತಿನ ಬಜೆಟ್ ಅಧಿವೇಶನವು ಜನವರಿ 31ರಿಂದ ಶುರುವಾಗಲಿದೆ. ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟಕ್ಕೆ ಬಹುಮತ ಇರುವ ಕಾರಣಕ್ಕೆ ಅಧಿವೇಶನದ ಪ್ರಥಮಾರ್ಧದಲ್ಲಿ ಮಸೂದೆಗೆ ಸಂಸತ್ತಿನ ಅಂಗೀಕಾರ ಪಡೆದುಕೊಳ್ಳಲು ಅವಕಾಶ ಇದೆ ಎಂದು ಮೂಲಗಳು ವಿವರಿಸಿವೆ.
ಎಲ್ಲ ತಿದ್ದುಪಡಿ ಪ್ರಸ್ತಾವಗಳನ್ನು ಸಮತಿಯು ಬಹಳ ಪ್ರಜಾಸತ್ತಾತ್ಮಕವಾಗಿ ಪರಿಶೀಲಿಸಿದೆ ಎಂದು ಪಾಲ್ ಅವರು ಹೇಳಿದ್ದಾರೆ. ಆದರೆ ಬಹುಮತದ ಅಭಿಪ್ರಾಯಕ್ಕೆ ಬೆಲೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಒಪ್ಪಿಗೆ ಪಡೆದಿರುವ ತಿದ್ದುಪಡಿಗಳು ಮಸೂದೆಯನ್ನು ಇನ್ನಷ್ಟು ಪರಿಣಾಮಕಾರಿ ಆಗಿಸಲಿವೆ ಎಂದು ಅವರು ಹೇಳಿದ್ದಾರೆ. ಸಮಿತಿಯು ಸೂಚಿಸಿದ ಬದಲಾವಣೆಗಳನ್ನು ಸರ್ಕಾರವು ಒಪ್ಪಲೇಬೇಕು ಎಂದು ಕೂಡ ತಿಳಿಸಿದ್ದಾರೆ.
ಈ ಪ್ರಸ್ತಾವಗಳಿಗೆ ಒಪ್ಪಿಗೆ
* ಸರ್ಕಾರಿ ಆಸ್ತಿ ಕುರಿತ ವ್ಯಾಜ್ಯದ ಬಗ್ಗೆ ಪರಿಶೀಲನೆ ನಡೆಸುವ ಅಧಿಕಾರವನ್ನು ಜಿಲ್ಲಾಧಿಕಾರಿಗೆ ನೀಡುವ ಬದಲು, ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ಹೇಳುವ, ಜಿಲ್ಲಾಧಿಕಾರಿಗಿಂತ ಮೇಲಿನ ಹುದ್ದೆಯ ಅಧಿಕಾರಿಗೆ ಆ ಅಧಿಕಾರ ನೀಡಬೇಕು ಎಂಬ ತಿದ್ದುಪಡಿಯನ್ನು ಒಪ್ಪಲಾಗಿದೆ ಎಂದು ಗೊತ್ತಾಗಿದೆ.
* ವಕ್ಫ್ ಮಂಡಳಿಯಲ್ಲಿ ನಾಲ್ಕು ಮಂದಿ ಮುಸ್ಲಿಮೇತರರಿಗೆ ಸ್ಥಾನ ಕಲ್ಪಿಸುವ ತಿದ್ದುಪಡಿಯನ್ನು ಒಪ್ಪಲಾಗಿದೆ.
ಎನ್‌ಡಿಎ ತಿದ್ದುಪಡಿಗಳಿಗೆ ಒಪ್ಪಿಗೆ
ಎನ್‌ಡಿಎ ಸದಸ್ಯರು ಹೇಳಿದ ತಿದ್ದುಪಡಿಗಳನ್ನು ಸಮಿತಿಯು ಒಪ್ಪಿಕೊಂಡಿದೆ. ಆದರೆ, ವಿರೋಧ ಪಕ್ಷಗಳ ಸದಸ್ಯರು ಹೇಳಿದ ತಿದ್ದುಪಡಿಗಳನ್ನು ತಿರಸ್ಕರಿಸಲಾಗಿದೆ. ಈಗ ಜಾರಿಯಲ್ಲಿರುವ ವಕ್ಫ್ ಕಾಯ್ದೆಯಲ್ಲಿನ ಅಂಶಗಳನ್ನು ಹೊಸ ಮಸೂದೆಯಲ್ಲಿ ಉಳಿಸಿಕೊಳ್ಳುವ ಉದ್ದೇಶದ ತಿದ್ದುಪಡಿಗಳನ್ನು ವಿರೋಧ ಪಕ್ಷಗಳ ಸದಸ್ಯರು ಸೂಚಿಸಿದ್ದರು.
ಸಮಿತಿಯ ಪ್ರಕ್ರಿಯೆಗಳು ಒಂದು ಅಣಕದಂತೆ ಆಗಿವೆ. ಸಮಿತಿಯು ವರದಿಯನ್ನು ಈಗಾಗಲೇ ಸಿದ್ಧಪಡಿಸಿ ಆಗಿರಬಹುದು. ಮಸೂದೆಗೆ ಸಂಸತ್ತಿನ ಅಂಗೀಕಾರ ದೊರೆತರೆ, ನಾವು ಕಾನೂನನ್ನು ರದ್ದುಪಡಿಸುವಂತೆ ಕೋರಿ ಕೋರ್ಟ್ ಮೆಟ್ಟಿಲೇರುತ್ತೇವೆಎ. ರಾಜಾ, ಡಿಎಂಕೆ ಸದಸ್ಯ
ಎಲ್ಲವೂ ಮೊದಲೇ ನಿರ್ಧಾರವಾಗಿತ್ತು. ನಮಗೆ ಮಾತನಾಡಲು ಅವಕಾಶ ಕೊಡಲಿಲ್ಲ. ಯಾವ ನಿಯಮವನ್ನೂ ಪಾಲಿಸಲಿಲ್ಲಕಲ್ಯಾಣ್ ಬ್ಯಾನರ್ಜಿ, ಟಿಎಂಸಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.