
ಸಾವು
(ಪ್ರಾತಿನಿಧಿಕ ಚಿತ್ರ)
ಇಂದೋರ್: ಮಧ್ಯಪ್ರದೇಶದ ಇಂದೋರ್‌ನ ಭಗೀರಥಪುರದಲ್ಲಿ ಕಲುಷಿತ ನೀರುಸೇವನೆ ಶಂಕೆ ಹಿನ್ನೆಲೆಯಲ್ಲಿ ಮೃತಪಟ್ಟ 21 ಮಂದಿಯ ಕುರಿತಾದ ಆಡಿಟ್ ವರದಿಯನ್ನು ಸ್ಥಳೀಯಾಡಳಿತಕ್ಕೆ ಸಲ್ಲಿಸಲಾಗಿದ್ದು, 15 ಮಂದಿ ವಾಂತಿ ಮತ್ತು ಭೇದಿಯಿಂದ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ದೇಶದ ಅತ್ಯಂತ ಸ್ವಚ್ಛ ನಗರವಾದ ಇಂದೋರ್‌ನ ಭಗೀರಥಪುರದಲ್ಲಿ ಕಲುಷಿತ ನೀರು ಕುಡಿದು ಭೇದಿ ಕಾಣಿಸಿಕೊಂಡ ಐದು ಪ್ರಕರಣಗಳು ಮಂಗಳವಾರ ಪತ್ತೆಯಾಗಿವೆ ಎಂದು ಮಧ್ಯಪ್ರದೇಶದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಗೀರಥಪುರದಲ್ಲಿ ಕಲುಷಿತ ನೀರು ಸೇವಿಸಿ ಭೇದಿಯಿಂದ ಬಳಲುತ್ತಿರುವ ರೋಗಿಗಳು ಆಸ್ಪತ್ರೆಗಳ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆದಿದ್ಧಾರೆ ಎಂದು ಇಂದೋರ್‌ನ ಮುಖ್ಯ ಮೆಡಿಕಲ್ ಮತ್ತು ಆರೋಗ್ಯ ಅಧಿಕಾರಿ(ಸಿಎಂಎಚ್‌ಒ) ಡಾ. ಮಾಧವ್ ಪ್ರಸಾದ್ ಹೇಳಿದ್ದಾರೆ.
ಈ ವರೆಗೆ ಕಲುಷಿತ ನೀರು ಸೇವಿಸಿ ವಾಂತಿ ಮತ್ತು ಭೇದಿಯಿಂದ 6 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ಖಚಿತಪಡಿಸಿತ್ತು.
ಈ ನಡುವೆ ಸರ್ಕಾರಿ ಸ್ವಾಮ್ಯದ ಮಹಾತ್ಮಗಾಂಧಿ ಮೆಮೋರಿಯಲ್ ಮೆಡಿಕಲ್ ಕಾಲೇಜಿನ ಸಮಿತಿಯೊಂದು ಆಡಿಟ್ ವರದಿಯನ್ನು ಡಿಸಿಗೆ ಸಲ್ಲಿಸಿದೆ. ಈ ವರದಿ ಬಗ್ಗೆ ತಿಳಿದಿರುವ ಮೂಲಗಳ ಪ್ರಕಾರ, ಮೃತ 21 ಮಂದಿ ಪೈಕಿ 15 ಜನರು ವಾಂತಿ, ಭೇದಿಯಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.
ಭಗೀರಥಪುರದ ಕೆಲ ಸಾವುಗಳು ಕಲುಷಿತ ನೀರು ಸೇವಿಸಿ ವಾಂತಿ ಮತ್ತು ಭೇದಿಯಿಂದ ಸಂಭವಿಸಿರುವ ಸಾಧ್ಯತೆ ಇದ್ದು, ಉಳಿದ ಸಾವುಗಳಿಗೂ ಕಲುಷಿತ ನೀರಿನ ದುರಂತಕ್ಕೂ ಸಂಬಂಧವಿಲ್ಲ ಎಂದು ಡಿಸಿ ಹೇಳಿದ್ದಾರೆ.
ಕಲುಷಿತ ನೀರು ಸೇವನೆ ಬಳಿಕ ವಾಂತಿ ಮತ್ತು ಭೇದಿಯಿಂದ 436 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. 403 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, 33 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.