2024ರ ಜುಲೈ 30ರಂದು ತೀವ್ರ ಭೂಕುಸಿತ ಸಂಭವಿಸಿದ್ದ ವಯನಾಡ್ ಜಿಲ್ಲೆಯ ಪ್ರದೇಶಗಳ ಪಕ್ಷಿನೋಟ
ವಯನಾಡ್ (ಕೇರಳ): ವಯನಾಡ್‌ನಲ್ಲಿ ಕಳೆದ ವರ್ಷ ಸಂಭವಿಸಿದ್ದ ಭೂಕುಸಿತದ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಟೌನ್‌ಶಿಪ್ ನಿರ್ಮಿಸುವ ಕಾಮಗಾರಿಯು ಶನಿವಾರ ಇಲ್ಲಿನ ಕಲ್‌ಪೆಟ್ಟಾ ಸಮೀಪದ ಎಲ್‌ಸ್ಟೋನ್ ಎಸ್ಟೇಟ್‌ನಲ್ಲಿ ಆರಂಭವಾಯಿತು.
ಯೋಜನೆಯ ಜಾರಿಗಾಗಿ ಸರ್ಕಾರ ಹೆಚ್ಚುವರಿಯಾಗಿ ₹17.77 ಕೋಟಿ ಠೇವಣಿ ಇಟ್ಟ ಬಳಿಕ ಎಲ್‌ಸ್ಟೋನ್ ಎಸ್ಟೇಟ್ ಭೂಮಿಯನ್ನು ಸ್ವಾಧೀನ ಪಡೆಯುವ ಹಾದಿಯನ್ನು ಕೇರಳ ಹೈಕೋರ್ಟ್ ಸುಗಮಗೊಳಿಸಿತ್ತು. ಇದರ ಹಿಂದೆಯೇ ಕಾಮಗಾರಿಯು ಆರಂಭವಾಗಿದೆ.
ಹೈಕೋರ್ಟ್‌ನ ಆದೇಶದ ಬಳಿಕ ತುರ್ತು ಸಭೆ ನಡೆಸಿದ ಜಿಲ್ಲಾ ಪ್ರಕೃತಿ ವಿಕೋಪ ಪ್ರಾಧಿಕಾರದ ಅಧಿಕಾರಿಗಳು, ಭೂಸ್ವಾಧೀನಕ್ಕಾಗಿ ಹೆಚ್ಚುವರಿ ಹಣ ಠೇವಣಿ ಇಟ್ಟರು. ಹಿಂದೆಯೇ, ಜಿಲ್ಲಾಧಿಕಾರಿ ಮೇಘಶ್ರೀ ನೇತೃತ್ವದಲ್ಲಿ ಭೂಸ್ವಾಧೀನ ಪ್ರಕ್ರಿಯೆಯು ಪೂರ್ಣಗೊಂಡಿತು. ಪ್ರಮುಖ ಗುತ್ತಿಗೆದಾರರ ಸಂಸ್ಥೆ ಉರಲುಂಗಳ್ ಲೇಬರ್ ಕಾಂಟ್ರ್ಯಾಕ್ಟ್ ಕೋಆಪರೇಟಿವ್ ಸೊಸೈಟಿ ಪ್ರತಿನಿಧಿಗಳು ಕಾಮಗಾರಿ ಶುರು ಮಾಡಿದರು ಎಂದು ಅಧಿಕಾರಿ ವಿವರಿಸಿದರು.
ಭೂಸ್ವಾಧೀನಕ್ಕಾಗಿ ರಾಜ್ಯ ಸರ್ಕಾರ ಮೊದಲು ₹26.56 ಕೋಟಿ ಠೇವಣಿ ಇಟ್ಟಿತ್ತು. ಆದರೆ, ಭೂಮಾಲೀಕತ್ವ ಹೊಂದಿದ್ದ ಕಂಪನಿಯ ಪ್ರತಿನಿಧಿಗಳು ಈ ಮೊತ್ತದ ಠೇವಣಿಯಿಂದ ತೃಪ್ತರಾಗಿ ಇರಲಿಲ್ಲ. ಹೀಗಾಗಿ, ಸರ್ಕಾರ ಹೆಚ್ಚುವರಿ ಮೊತ್ತ ಠೇವಣಿ ಇರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.