ADVERTISEMENT

ಕೋಲ್ಕತ್ತ: ಜತೆಯಲ್ಲೇ ಮೊಳಗಿದ ರಾಜ್ಯಗೀತೆ, ರಾಷ್ಟ್ರಗೀತೆ

ಪಿಟಿಐ
Published 8 ಫೆಬ್ರುವರಿ 2024, 16:11 IST
Last Updated 8 ಫೆಬ್ರುವರಿ 2024, 16:11 IST
   

ಕೋಲ್ಕತ್ತ: ಒಂದೆಡೆ ರಾಜ್ಯಗೀತೆ ಮೊಳಗುತ್ತಿದ್ದರೆ, ಇನ್ನೊಂದೆಡೆ ಬಿಜೆಪಿ ಶಾಸಕರು ರಾಷ್ಟ್ರಗೀತೆ ಹಾಡಿದರು.

ಈ ಗೊಂದಲದ ನಡುವೆಯೇ ಪಶ್ಚಿಮ ಬಂಗಾಳದ ವಿಧಾನಸಭೆಯ ಬಜೆಟ್‌ ಅಧಿವೇಶನ ಗುರುವಾರ ಆರಂಭವಾಯಿತು.

ಅಧಿವೇಶನ ಆರಂಭಕ್ಕೂ ಮುನ್ನ ಸ್ಪೀಕರ್‌ ಬಿಮನ್‌ ಬ್ಯಾನರ್ಜಿ ಅವರು, ರಾಜ್ಯಗೀತೆಯಾದ ‘ಬಂಗ್ಲಾರ್‌ ಮತಿ ಬಂಬ್ಲಾರ್‌ ಜಲ್‌’ ಅನ್ನು ‘ಪ್ಲೇ’ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ರಾಜ್ಯಗೀತೆ ಆರಂಭವಾಗುತ್ತಿದ್ದಂತೆಯೇ ಎದ್ದು ನಿಂತ ಬಿಜೆಪಿ ಶಾಸಕರು ರಾಷ್ಟ್ರಗೀತೆ ಹಾಡಿದರು.

ADVERTISEMENT

‘ರಾಷ್ಟ್ರಗೀತೆಯನ್ನು ಕೊನೆಯಲ್ಲಿ ಹಾಡಲಾಗುತ್ತದೆ. ಆದರೆ ರಾಜ್ಯಗೀತೆ ನುಡಿಸುವಾಗ ಬಿಜೆಪಿಯುವರು ರಾಷ್ಟ್ರಗೀತೆ ಹಾಡಿದ್ದಾರೆ. ಈ ಮೂಲಕ ಅವರು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖಂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಅಗ್ನಿಮಿತ್ರ ಪೌಲ್‌ ಅವರು, ‘ಸರ್ಕಾರಿ ಕಾರ್ಯಕ್ರಮ ಅಥವಾ ಬಜೆಟ್‌ ಅಧಿವೇಶನದ ಆರಂಭ ಮತ್ತು ಅಂತ್ಯದಲ್ಲಿ ಯಾವಾಗಲೂ ರಾಷ್ಟ್ರಗೀತೆಯನ್ನು ಹಾಡಲಾಗುತ್ತದೆ’ ಎಂದರು.

ಬಂಗಾಳಿ ಹೊಸ ವರ್ಷದ ಮೊದಲ ದಿನವಾದ ಪೊಯಿಲಾ ಜೋಯಿಸಾಕಾ ಅನ್ನು ರಾಜ್ಯ ದಿನವೆಂದು ಹಾಗೂ ನೊಬೆಲ್‌ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಬರೆದ ‘ಬಂಗ್ಲಾರ್ ಮತಿ ಬಂಗ್ಲಾರ್‌ ಜಲ್‌’ ಹಾಡನ್ನು ರಾಜ್ಯ ಗೀತೆ ಎಂದು ಪಶ್ಚಿಮ ಬಂಗಾಳ ಸರ್ಕಾರ ಕಳೆದ ತಿಂಗಳು ಅಧಿಸೂಚನೆ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.