ADVERTISEMENT

ಮುರ್ಶಿದಾಬಾದ್‌ಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ: ಪಶ್ಚಿಮ ಬಂಗಾಳ ರಾಜ್ಯಪಾಲ

ಪರಿಸ್ಥಿತಿ ಅವಲೋಕಿಸಿ ಕೇಂದ್ರಕ್ಕೆ ವರದಿ ಸಲ್ಲಿಸುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2025, 15:39 IST
Last Updated 17 ಏಪ್ರಿಲ್ 2025, 15:39 IST
ಸಿ.ವಿ.ಆನಂದ ಬೋಸ್‌
ಸಿ.ವಿ.ಆನಂದ ಬೋಸ್‌   

ಕೋಲ್ಕತ್ತ: ಹಿಂಸಾಚಾರ ಪೀಡಿತ ಮುರ್ಶಿದಾಬಾದ್‌ಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ಅವಲೋಕಿಸುವುದಾಗಿ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ. ಆನಂದ ಬೋಸ್‌ ಗುರುವಾರ ಹೇಳಿದ್ದಾರೆ. ಮುರ್ಶಿದಾಬಾದ್‌ಗೆ ರಾಜ್ಯಪಾಲರು ಸದ್ಯಕ್ಕೆ ಭೇಟಿ ನೀಡದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನವಿ ಮಾಡಿದ್ದರೂ ರಾಜ್ಯಪಾಲರು ಭೇಟಿ ನೀಡುತ್ತಿರುವುದು ಮಹತ್ವ ಪಡೆದಿದೆ. 

ಮಾಧ್ಯಮಗಳೊಂದಿಗೆ ರಾಜಭವನದಲ್ಲಿ ಮಾತನಾಡಿದ ಬೋಸ್, ‘ಮುರ್ಶಿದಾಬಾದ್‌ಗೆ ಖುದ್ದು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಬೇಕಿದೆ. ಇದು ಎಲ್ಲಾ ಆಯಾಮಗಳಲ್ಲೂ ಉನ್ನತ ಮಟ್ಟದಲ್ಲಿ ಪರೀಕ್ಷಿಸಬೇಕಾದ ವಿಚಾರ. ಸಹಜಸ್ಥಿತಿ ಮರುಸ್ಥಾಪನೆಯಾಗಿದ್ದರೆ ಸಂತಸವಾಗುತ್ತದೆ. ಅದೇ ಆಧಾರದಲ್ಲಿ ನಾನು ವರದಿ ನೀಡುತ್ತೇನೆ’ ಎಂದಿದ್ದಾರೆ. ಈ ಮೂಲಕ ಕೇಂದ್ರಕ್ಕೆ ವರದಿ ಸಲ್ಲಿಸುವ ಸುಳಿವನ್ನು ಅವರು ನೀಡಿದ್ದಾರೆ.

ಮಮತಾ ಅವರ ಮನವಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ‘ಮುಖ್ಯಮಂತ್ರಿಗಳ ಮನವಿಯನ್ನು ಪರಿಗಣಿಸಲಾಗಿತ್ತು. ಆದರೆ, ಮುರ್ಶಿದಾಬಾದ್‌ನ ಸಂತ್ರಸ್ತರನ್ನು ಭೇಟಿಯಾದ ಬಳಿಕ ವಿಶೇಷವಾಗಿ ಮಹಿಳಾ ಸಂತ್ರಸ್ತರ ಮಾತುಗಳನ್ನು ಆಲಿಸಿದ ಬಳಿಕ ನಾನೇ ಭೇಟಿ ನೀಡಲು ನಿರ್ಧರಿಸಿದೆ’ ಎಂದೂ ಹೇಳಿದ್ದಾರೆ. 

ADVERTISEMENT

ಮಮತಾ ಮನವಿ: ಮುರ್ಶಿದಾಬಾದ್‌ನಲ್ಲಿ ಸಹಜ ಸ್ಥಿತಿ ಮರುಸ್ಥಾಪಿಸಲಾಗುತ್ತಿದೆ. ಈ ಸಂದರ್ಭದಲ್ಲಿ ರಾಜ್ಯ‍ಪಾಲರು ಭೇಟಿ ನೀಡದೇ, ತಮ್ಮ ಭೇಟಿಯನ್ನು ಮುಂದೂಡಬೇಕು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನವಿ ಮಾಡಿದ್ದಾರೆ.

ರಾಷ್ಟ್ರಪತಿ ಆಡಳಿತ ಜಾರಿ ಆಗಲಿ: ವಿಎಚ್‌ಪಿ

ವಕ್ಫ್‌ ಕಾಯ್ದೆಯನ್ನು ವಿರೋಧಿಸುವ ನೆಪದಲ್ಲಿ ಮುರ್ಶಿದಾಬಾದ್‌ನಲ್ಲಿ ಹಿಂದೂಗಳನ್ನು ನಿರ್ನಾಮ ಮಾಡುವ ಪ್ರಯತ್ನ ನಡೆಯುತ್ತಿದೆ. ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಏ.19ರಂದು ದೇಶಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. ಈ ವೇಳೆ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡುವಂತೆ ರಾಷ್ಟ್ರಪತಿ ಮುರ್ಮು ಅವರಿಗೆ ಮನವಿ ಪತ್ರ ಸಲ್ಲಿಸುತ್ತೇವೆ. – ಮಿಲಿಂದ್‌ ಪರಂದೆ ವಿಶ್ವಹಿಂದೂ ಪರಿಷತ್‌ ಪ್ರಧಾನ ಕಾರ್ಯದರ್ಶಿ

ಟಿಎಂಸಿ ವಿರುದ್ಧ ನಾಗರಿಕರ ಅಭಿಯಾನ’

ಮಮತಾ ಬ್ಯಾನರ್ಜಿ ಆಡಳಿತದಲ್ಲಿ ನಡೆಯುತ್ತಿರುವ ದೌರ್ಜನ್ಯ ಅರಾಜಕತೆ ಅಪರಾಧಗಳ ವಿರುದ್ಧ ಪಶ್ಚಿಮ ಬಂಗಾಳದ ಜನರು ಧ್ವನಿ ಎತ್ತಿದ್ದಾರೆ. www.soibenaaarbangla.com ಮೂಲಕ ನಡೆಯುತ್ತಿರುವ ಡಿಜಿಟಲ್‌ ಅಭಿಯಾನವೇ ಇದಕ್ಕೆ ಸಾಕ್ಷಿ ಎಂದು ಬಿಜೆಪಿ ನಾಯಕ ಅಮಿತ್‌ ಮಾಳವೀಯ ಹೇಳಿದ್ದಾರೆ. ಬಂಗಾಳವನ್ನು ಉಳಿಸಲು ಟಿಎಂಸಿಗೆ ಮತ ನೀಡದಂತೆ ಅಭಿಯಾನದ ಮೂಲಕ ಜನರಿಗೆ ಮನವಿ ಮಾಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.