ADVERTISEMENT

ಇ.ಡಿ ಅಧಿಕಾರಿಗಳಿಂದ ಪಶ್ಚಿಮ ಬಂಗಾಳ ಕೈಗಾರಿಕಾ ಸಚಿವ ಪಾರ್ಥ ಚಟರ್ಜಿ ಬಂಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಜುಲೈ 2022, 11:22 IST
Last Updated 23 ಜುಲೈ 2022, 11:22 IST
ಪಾರ್ಥ ಚಟರ್ಜಿ
ಪಾರ್ಥ ಚಟರ್ಜಿ   

ಕೊಲ್ಕತ್ತ: ಪಶ್ಚಿಮ ಬಂಗಾಳ ಕೈಗಾರಿಕಾ ಸಚಿವಪಾರ್ಥ ಚಟರ್ಜಿ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶನಿವಾರ ಬೆಳಿಗ್ಗೆಬಂಧಿಸಿದ್ದಾರೆ.

ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಮನೆ ಮೇಲಿನ ದಾಳಿ ವೇಳೆ ₹ 20 ಕೋಟಿ ನಗದನ್ನು ವಶಕ್ಕೆ ಪಡೆದಿರುವುದಾಗಿ ಜಾರಿ ನಿರ್ದೇಶನಾಲಯ ನಿನ್ನೆ ಹೇಳಿತ್ತು. ಇಂದು ಕೂಡ ಅರ್ಪಿತಾ ಮನೆ ತಪಾಸಣೆ ಮುಂದುವರೆದಿದೆ.

ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿಯಲ್ಲಿ ಭಾರಿ ಮೊತ್ತದ ಹಣಕಾಸಿನ ಅವ್ಯವಹಾರ ನಡೆದಿದ್ದು, ಇದು ಸಚಿವ ಪಾರ್ಥ ಚಟರ್ಜಿ ಅವರ ನೆರಳಿನಲ್ಲಿ ನಡೆದಿದೆ ಎಂದು ಇ.ಡಿ ಆರೋಪಿಸಿದೆ.

ADVERTISEMENT

ಇ.ಡಿ ಅಧಿಕಾರಿಗಳುಇಂದು ಬೆಳಿಗ್ಗೆ 8 ಕಾರುಗಳಲ್ಲಿ ಸಿಆರ್‌ಪಿಎಫ್ ಯೋಧರ ಭದ್ರತೆಯೊಂದಿಗೆ ದಕ್ಷಿಣ ಕೊಲ್ಕತ್ತದಲ್ಲಿರುವ ಪಾರ್ಥ ಚಟರ್ಜಿ ಅವರ ಮನೆಗೆ ತೆರಳಿ ಅವರನ್ನು ಬಂದಿಸಿದ್ದಾರೆ.

ಶೋಧ ಕಾರ್ಯಾಚರಣೆ ನಡೆಸಿದ ಇ.ಡಿ ಅಧಿಕಾರಿಗಳು, ಬ್ಯಾಂಕ್ ಸಿಬ್ಬಂದಿಯ ಸಹಾಯ ಪಡೆದು ನೋಟು ಎಣಿಕೆ ಯಂತ್ರಗಳ ಮೂಲಕ ನಗದನ್ನು ಲೆಕ್ಕಾಚಾರ ಮಾಡಿದ್ದಾರೆ.ಅರ್ಪಿತಾ ಮುಖರ್ಜಿಗೆ ಸಂಬಂಧಿಸಿದ ಸ್ಥಳಗಳಲ್ಲಿ 20ಕ್ಕೂ ಅಧಿಕ ಮೊಬೈಲ್ ಫೋನ್‌ಗಳನ್ನೂ ಜಪ್ತಿ ಮಾಡಲಾಗಿದೆ.

ಇದೇ ವೇಳೆ, ಶಿಕ್ಷಣ ಖಾತೆಯ ರಾಜ್ಯ ಸಚಿವ ಪರೇಶ್ ಸಿ ಅಧಿಕಾರಿ, ಶಾಸಕ ಮಾಣಿಕ್ ಭಟ್ಟಾಚಾರ್ಯ ಸೇರಿ ಹಲವರ ಮೇಲೆ ಇ.ಡಿ ತಪಾಸಣೆಯನ್ನು ಮುಂದುವರೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.