ADVERTISEMENT

ಪಶ್ಚಿಮ ಬಂಗಾಳ ಹಿಂಸಾಚಾರ: ಮನೆಬಿಟ್ಟು ಹೋದವರನ್ನು ವಾಪಸ್ ಕರೆಯಲು ಹೈಕೋರ್ಟ್ ಸೂಚನೆ

ಪಿಟಿಐ
Published 5 ಜೂನ್ 2021, 3:39 IST
Last Updated 5 ಜೂನ್ 2021, 3:39 IST
ನಂದಿಗ್ರಾಮದಲ್ಲಿ ಚುನಾವಣೋತ್ತರ ಹಿಂಸಾಚಾರದ ಸಂತ್ರಸ್ತರನ್ನು ರಾಜ್ಯಪಾಲ ಜಗದೀಪ್ ಧನ್‌ಕರ್ ಭೇಟಿಯಾದ ಸಂದರ್ಭದ ಸಂಗ್ರಹ ಚಿತ್ರ – ‍ಪಿಟಿಐ
ನಂದಿಗ್ರಾಮದಲ್ಲಿ ಚುನಾವಣೋತ್ತರ ಹಿಂಸಾಚಾರದ ಸಂತ್ರಸ್ತರನ್ನು ರಾಜ್ಯಪಾಲ ಜಗದೀಪ್ ಧನ್‌ಕರ್ ಭೇಟಿಯಾದ ಸಂದರ್ಭದ ಸಂಗ್ರಹ ಚಿತ್ರ – ‍ಪಿಟಿಐ   

ಕೋಲ್ಕತ್ತ: ಚುನಾವಣೋತ್ತರ ಹಿಂಸಾಚಾರದ ವೇಳೆ ಮನೆ ಬಿಟ್ಟು ಹೋದವರನ್ನು ಅವರವರ ಮನೆಗಳಿಗೆ ವಾಪಸಾಗುವಂತೆ ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಲ್ಕತ್ತ ಹೈಕೋರ್ಟ್ ಸೂಚಿಸಿದೆ.

ಹಿಂಸಾಚಾರದಿಂದ ಅನೇಕರು ಬಲವಂತವಾಗಿ ಮನೆ ಬಿಟ್ಟು ತೆರಳಬೇಕಾದ ಸಂದರ್ಭ ಬಂದಿತ್ತು ಎಂಬ ದೂರುಗಳ ಬಗ್ಗೆ ಐವರು ನ್ಯಾಯಾಧೀಶರ ಪೀಠ ವಿಚಾರಣೆ ನಡೆಸಿದೆ. ರಾಜ್ಯದ ಹಲವು ಜಿಲ್ಲೆಗಳಿಂದ ದೂರುಗಳು ಬಂದಿವೆ ಎಂದು ಪೀಠ ಹೇಳಿದೆ.

ಹಿಂಸಾಚಾರದಿಂದ ತೊಂದರೆಗೀಡಾದವರು ರಾಜ್ಯ ಗೃಹ ಕಾರ್ಯದರ್ಶಿ ನೀಡಿರುವ ಅಧಿಕೃತ ಇ–ಮೇಲ್ ಐಡಿಗೆ ದೂರು ಸಲ್ಲಿಸಬಹುದು ಎಂದು ನ್ಯಾಯಪೀಠ ಹೇಳಿದೆ.

ADVERTISEMENT

ಈ ಕುರಿತು ಜೂನ್ 11ರಂದು ಮತ್ತೆ ವಿಚಾರಣೆ ನಡೆಯಲಿದೆ ಎಂದೂ ಪೀಠ ತಿಳಿಸಿದೆ.

ಅಧಿಕಾರಿಗಳು ಕ್ರಮ ಕೈಗೊಳ್ಳಲು ವಿಫಲರಾದರೆ ಸಂತ್ರಸ್ತರು ಮನೆಗಳಿಗೆ ಮರಳುವುದನ್ನು ಖಚಿತಪಡಿಸಿಕೊಳ್ಳಲು ಕೋರ್ಟ್ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದೂ ಪೀಠ ಎಚ್ಚರಿಕೆ ನೀಡಿದೆ.

ತೊಂದರೆಗೀಡಾಗಿರುವವರು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಇ–ಮೇಲ್ ಐಡಿಗೂ ದೂರಿನ ಪ್ರತಿಯನ್ನು ಕಳುಹಿಸಬಹುದು ಎಂದು ನ್ಯಾಯಪೀಠ ಹೇಳಿದೆ.

ಕಾನೂನು–ಸುವ್ಯವಸ್ಥೆ ಕಾಪಾಡಿಕೊಳ್ಳುವುದನ್ನು ಖಾತರಿಪಡಿಸುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದೂ ಕೋರ್ಟ್ ಹೇಳಿದೆ.

ಮೇ 2ರಂದು ರಾಜ್ಯ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟಗೊಂಡಿತ್ತು. ಆ ಬಳಿಕ ರಾಜ್ಯದ ಹಲವೆಡೆ ಹಿಂಸಾಚಾರ ನಡೆದಿತ್ತು. ಹಿಂಸಾಚಾರದಿಂದಾಗಿ ಅನೇಕರು ಮನೆ ಬಿಟ್ಟು ಓಡಿಹೋಗಬೇಕಾದ ಸನ್ನಿವೇಶ ಸೃಷ್ಟಿಯಾಗಿತ್ತು ಎಂದೂ ವರದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.