ADVERTISEMENT

ಭಯಪಡುವ ಅಗತ್ಯ ಇಲ್ಲ, ‘ಸುಪ್ರೀಂ ಕೋರ್ಟ್’ ಎಂದರೆ ನರಭಕ್ಷಕ ಹುಲಿ ಅಲ್ಲ

ಪಿಟಿಐ
Published 21 ಸೆಪ್ಟೆಂಬರ್ 2018, 20:15 IST
Last Updated 21 ಸೆಪ್ಟೆಂಬರ್ 2018, 20:15 IST
   

ನವದೆಹಲಿ: ಪ್ರಕರಣವು ವಿಚಾರಣೆಗೆ ಬಾಕಿ ಇದೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರಗಳು ಭಯಪಡುವ ಅಗತ್ಯ ಇಲ್ಲ. ಸುಪ್ರೀಂ ಕೋರ್ಟ್‌ ಎಂದರೆ ‘ನರಭಕ್ಷಕ ಹುಲಿ’ ಅಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಆಂಧ್ರ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿ ಟ್ರೈಮೆಕ್ಸ್‌ ಗ್ರೂಪ್‌ ಸಂಸ್ಥೆಯ ವಿರುದ್ಧ ಸಲ್ಲಿಸಲಾಗಿರುವ ದೂರು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ತಂತ್ರ ಎಂದು ಆ ಕಂಪನಿಯ ಪರವಾಗಿ ವಾದಿಸಿದ ಹಿರಿಯ ವಕೀಲ ಮುಕುಲ್‌ ರೋಹಟಗಿ ಹೇಳಿದರು. ಟ್ರೈಮೆಕ್ಸ್‌ ಸಂಸ್ಥೆಯ ಗಣಿಗಾರಿಕೆ ಕಾರ್ಯಾಚರಣೆಗೆ ತಡೆ ನೀಡಿ ಆದೇಶ ಹೊರಡಿಸಲಾಗಿದೆ ಎಂದು ಆಂಧ್ರ ಪ್ರದೇಶ ಸರ್ಕಾರದ ಪರ ವಕೀಲರು ತಿಳಿಸಿದರು.

ಆದರೆ, ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಅಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿಲ್ಲ ಎಂದು ರೋಹಟಗಿ ವಾದಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿಗಳಾದ ಮದನ್‌ ಬಿ. ಲೋಕರ್‌ ಮತ್ತು ದೀಪಕ್‌ ಗುಪ್ತಾ ಅವರ ಪೀಠವು ‘ಸುಪ್ರೀಂ ಕೋರ್ಟ್‌ ಬಗ್ಗೆ ರಾಜ್ಯಗಳು ಭಯಪಡುವ ಅಗತ್ಯ ಇಲ್ಲ’ ಎಂದು ಹೇಳಿತು.

ADVERTISEMENT

ಆಂಧ್ರ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದುಮಾಜಿ ಅಧಿಕಾರಿ ಇ.ಎ.ಎಸ್‌ ಶರ್ಮಾ ದೂರು ಸಲ್ಲಿಸಿದ್ದಾರೆ. ‘ಟ್ರೈಮೆಕ್ಸ್‌ ಸಂಸ್ಥೆಯ ಗಣಿಗಾರಿಕೆ ಅರ್ಜಿಯನ್ನು ಅಮಾನತು ಮಾಡಲಾಗಿದೆ ಅಷ್ಟೇ. ಗಣಿಗಾರಿಕೆ ಪರವಾನಗಿಯನ್ನು ರದ್ದು ಮಾಡಬೇಕು ಮತ್ತು ಸಂಸ್ಥೆಯಿಂದ ಹಣವನ್ನು ವಸೂಲು ಮಾಡಬೇಕು’ ಎಂದು ಅರ್ಜಿದಾರರ ಪರವಾಗಿ ವಾದಿಸಿದ ವಕೀಲ ಪ್ರಶಾಂತ್‌ ಭೂಷಣ್‌ ಹೇಳಿದರು.

ಆಂಧ್ರ ಪ್ರದೇಶ ಸರ್ಕಾರದ ಆದೇಶದಿಂದಾಗಿ ಅರ್ಜಿದಾರರ ಪ್ರಯತ್ನ ಯಶಸ್ವಿಯಾಗಿದೆ ಎಂದು ರೋಹಟಗಿ ಮತ್ತೆ ಪ‍್ರತಿಪಾದಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪೀಠವು, ‘ಒಬ್ಬಿಬ್ಬರು ವ್ಯಕ್ತಿಗಳಿಂದ ಭಯಪಡುವಷ್ಟು ರಾಜ್ಯ ಸರ್ಕಾರ ಅಸಹಾಯಕ ಅಲ್ಲ’ ಎಂದು ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.