ADVERTISEMENT

ಬಿಜೆಪಿ ಜನರಿಗೆ ಕತ್ತಿ ನೀಡುತ್ತಿದೆ, ನಾವು ಪೆನ್‌ ನೀಡಬಯಸುತ್ತೇವೆ: ತೇಜಸ್ವಿ

ಪಿಟಿಐ
Published 22 ಫೆಬ್ರುವರಿ 2024, 15:50 IST
Last Updated 22 ಫೆಬ್ರುವರಿ 2024, 15:50 IST
ತೇಜಸ್ವಿ ಯಾದವ್
ತೇಜಸ್ವಿ ಯಾದವ್   

ಸಿವಾನ್‌, ಬಿಹಾರ: ‘ಬಿಜೆಪಿಯು ಜನರಿಗೆ ಕತ್ತಿಗಳನ್ನು ನೀಡುತ್ತಿದ್ದು, ವಿಷವನ್ನು ಹರಡುತ್ತಿದೆ. ನಾವು ಜನರ ಕೈಗಳಿಗೆ ಪೆನ್‌ ನೀಡಲು ಬಯಸುತ್ತೇವೆ, ಉದ್ಯೋಗ ಸೃಷ್ಟಿಸಲು ಪಕ್ಷ ಒತ್ತು ನೀಡಲಿದೆ’ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಗುರುವಾರ ಹೇಳಿದರು.

ಡಿಸಿಎಂ ಸ್ಥಾನ ಕಳೆದುಕೊಂಡ ತೇಜಸ್ವಿ ಯಾದವ್ ಅವರು ಈಗ ರಾಜ್ಯದಲ್ಲಿ ‘ಜನ ವಿಶ್ವಾಸ ಯಾತ್ರೆ‘ ಕೈಗೊಂಡಿದ್ದು, ಇಲ್ಲಿ ನಡೆದ ಯಾತ್ರೆಯಲ್ಲಿ ಮಾತನಾಡುತ್ತಿದ್ದರು. ಆರ್‌ಜೆಡಿ ಮೈತ್ರಿ ಕಡಿದುಕೊಂಡಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಎನ್‌ಡಿಎ ಜೊತೆಗೂಡಿ ಸರ್ಕಾರ ರಚಿಸಿದ್ದರು.

ಬಿಜೆಪಿಯು ರಾಜಕೀಯದ ಜತೆಗೆ ಧಾರ್ಮಿಕ ಭಾವನೆಗಳನ್ನು ಸೇರಿಸುತ್ತಿದೆ ಎಂದು ತೇಜಸ್ವಿ ಆರೋಪಿಸಿದರು. ರಾಜ್ಯದಲ್ಲಿ ಆರ್‌ಜೆಡಿ–ಬಿಜೆಪಿ ನಡುವೆಯೇ ನೇರ ಸ್ಪರ್ಧೆ ಇದೆ ಎಂದು ಪ್ರತಿಪಾದಿಸಿದರು. 

ADVERTISEMENT

‘ನಮ್ಮ ಮನೆಯಲ್ಲೂ ದೇಗುಲವಿದೆ. ನಿತ್ಯ ಪೂಜಿಸುತ್ತೇನೆ. ಆದರೆ, ನಾವು ಜನರ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡಿದರೆ, ಎಷ್ಟು ದೇಗುಲಗಳಿಗೆ ಭೇಟಿ ನೀಡಿ, ಪುಣ್ಯಸ್ಥಾನ ಮಾಡಿದರೂ ನಮ್ಮ ಪಾಪ ತೊಳೆದು ಹೋಗುವುದಿಲ್ಲ‘ ಎಂದು ಹೇಳಿದರು.  

ತೇಜಸ್ವಿ ನೇತೃತ್ವದ ಯಾತ್ರೆಯು ಮಾರ್ಚ್‌ 1ರಂದು ಮುಗಿಯಲಿದೆ. ಪಟ್ನಾದಲ್ಲಿ ಇವರು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು.

ಈ ಮಧ್ಯೆ, ಬಿಹಾರ ಬಿಜೆಪಿ ಘಟಕದ ಮಾಜಿ ಅಧ್ಯಕ್ಷರಾದ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಅವರು, ರಾಜ್ಯದಲ್ಲಿ 17 ತಿಂಗಳು ಮೈತ್ರಿ ಸರ್ಕಾರದಲ್ಲಿ ಕ್ರಿಮಿನಲ್‌ಗಳು ಆಶ್ರಯ ಪಡೆದಿದ್ದರು. ತೇಜಸ್ವಿ ಯಾದವ್ ಉಪಮುಖ್ಯಮಂತ್ರಿಯಾಗಿದ್ದರು ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.