ADVERTISEMENT

ನ್ಯಾ. ಗೌರಿ ಪ್ರಕರಣ– ನ್ಯಾಯಯುತ ಪರಿಶೀಲನಾ ಪ್ರಕ್ರಿಯೆ ಇದೆ: ಸುಪ್ರೀಂಕೋರ್ಟ್

ಗೌರಿ ಅವರು ಪ್ರಮಾಣ ವಚನ ಸ್ವೀಕರಿಸುವುದನ್ನು ತಡೆಯ ಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 19:07 IST
Last Updated 7 ಫೆಬ್ರುವರಿ 2023, 19:07 IST
   

ನವದೆಹಲಿ: ‘ಎರಡು ವರ್ಷಗಳ ಅವಧಿಗೆ ಗೌರಿ ಅವರು ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದಾರೆ. ಈ ಹಂತದಲ್ಲಿ ನಾವು ಯಾವುದೇ ಆದೇಶವನ್ನು ನೀಡಲು ಸಾಧ್ಯವಿಲ್ಲ. ಜೊತೆಗೆ ನಮ್ಮಲ್ಲಿ ಅತ್ಯಂತ ಪ್ರಬಲವಾದ ಮತ್ತು ನ್ಯಾಯಯುತವಾದ ಪರಿಶೀಲನಾ ಪ್ರಕ್ರಿಯೆ ಇದೆ’ ಎಂದು ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ಬಿ.ಆರ್‌. ಗವಾಯಿ ಅವರಿದ್ದ ಪೀಠ ಹೇಳಿತು.

ಗೌರಿ ಅವರು ಮದ್ರಾಸ್‌ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸುವುದನ್ನು ತಡೆಯಬೇಕು ಎಂದು ಕೋರಿ ಕೆಲ ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಪೀಠ ಹೀಗೆ ಹೇಳಿತು. ನ್ಯಾಯಾಲಯವು ನಿತ್ಯ ಪ್ರಾರಂಭವಾಗುವುದಕ್ಕೆ ಐದು ನಿಮಿಷ ಮೊದಲೇ ಈ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಪ್ರಾರಂಭಿಸಿತು.

‘ಕೊಲಿಜಿಯಂ ಒಂದು ನಿರ್ಧಾರ ತೆಗೆದುಕೊಂಡಿದೆ ಎಂದಾದರೆ, ಅದಕ್ಕಾಗಿ ಆಯಾ ಹೈಕೋರ್ಟ್‌ನ ನ್ಯಾಯಮೂರ್ತಿಗಳಿಂದಲೂ ಅಭಿಪ್ರಾಯವನ್ನು ತೆಗೆದುಕೊಂಡಿರುತ್ತದೆ. ಸಂಬಂಧಪಟ್ಟ ಹೈಕೋರ್ಟ್‌ನ ನ್ಯಾಯಮೂರ್ತಿಗಳಿಗೆ ಈ ಎಲ್ಲಾ ವಿಚಾರಗಳು ತಿಳಿದಿಲ್ಲ ಎಂದು ನೀವು ಹೇಗೆ ಭಾವಿಸುತ್ತೀರಿ’ ಎಂದು ಪೀಠ ಪ್ರಶ್ನಿಸಿತು.

ADVERTISEMENT

‘ಪ್ರಮಾಣವಚನಕ್ಕೆ ಅನುಗುಣವಾಗಿ ನಡೆದುಕೊಳ್ಳದಿದ್ದರೆ, ಪ್ರಮಾಣವಚನಕ್ಕೆ ತಕ್ಕಂತೆ ಕರ್ತವ್ಯ ನಿರ್ವಹಿಸದಿದ್ದರೆ ಕೊಲಿಜಿಯಂ ಕ್ರಮ ಕೈಗೊಳ್ಳಲಿದೆ. ಈ ಹಿಂದೆಯೂ ಹೆಚ್ಚುವರಿ ನ್ಯಾಯಮೂರ್ತಿಗಳನ್ನು ಕಾಯಂ ಮಾಡದಿರುವ ನಿದರ್ಶನಗಳು ಇವೆ’ ಎಂದಿತು.

‘ಒಂದು ಹುದ್ದೆಗೆ ವ್ಯಕ್ತಿಯೊಬ್ಬರು ಅರ್ಹರಾಗುವುದು ಹಾಗೂ ಸರಿಹೊಂದುವುದರ ಮಧ್ಯೆ ವ್ಯತ್ಯಾಸವಿದೆ. ಒಬ್ಬ ವ್ಯಕ್ತಿಯು ಆ ಹುದ್ದೆಗೆ ಅರ್ಹರೊ, ಇಲ್ಲವೊ ಎನ್ನುವುದನ್ನು ಪ್ರಶ್ನಿಸಬಹುದು. ಆದರೆ, ಅವರು ಸೂಕ್ತರೊ ಅಲ್ಲವೊ ಎನ್ನುವ ಕುರಿತು ನ್ಯಾಯಾಲಯ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಜೊತೆಗೆ ಈ ಎಲ್ಲಾ ಅಂಶಗಳ ಬಗ್ಗೆ ಗಮನಿಸಬೇಕು ಎಂದು ನಾವು ಕೊಲಿಜಿಯಂಗೆ ಹೇಳುವ ಸ್ಥಾನದಲ್ಲಿಲ್ಲ’ ಎಂದಿತು.

ಕೋಟ್‌

ಈ ರೀತಿಯ ಅರ್ಜಿಗಳಿಗೆ ಉತ್ತೇಜನ ನೀಡಿದರೆ, ನಾವು ಕೆಟ್ಟ ನಿದರ್ಶನವನ್ನು ನೀಡಿದಂತಾಗುತ್ತದೆ

ಸುಪ್ರೀಂ ಕೋರ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.