ADVERTISEMENT

ರಫೇಲ್‌ ದಾಖಲೆಗಳಿಗೆ ಸಂಬಂಧಿಸಿದ ಮೂಲಗಳನ್ನು ಬಿಟ್ಟು ಕೊಡುವುದಿಲ್ಲ: ಎನ್‌.ರಾಮ್‌

ಪಿಟಿಐ
Published 6 ಮಾರ್ಚ್ 2019, 16:54 IST
Last Updated 6 ಮಾರ್ಚ್ 2019, 16:54 IST
   

ನವದೆಹಲಿ: ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಾರ್ವಜನಿಕ ಹಿತಾಸಕ್ತಿಗಾಗಿ ಪ್ರಕಟಿಸಲಾಗಿದ್ದು, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿರುವ ಮೂಲಗಳ ಕುರಿತು ದಿ ಹಿಂದೂಪತ್ರಿಕೆಯಿಂದ ಯಾರಿಗೂ ಯಾವುದೇ ಮಾಹಿತಿ ಸಿಗುವುದಿಲ್ಲ ಎಂದು ದಿ ಹಿಂದೂಮುದ್ರಣ ಸಮೂಹದ ಮುಖ್ಯಸ್ಥ ಎನ್‌.ರಾಮ್‌ ಬುಧವಾರ ಹೇಳಿದ್ದಾರೆ.

ರಫೇಲ್‌ ಯುದ್ಧ ವಿಮಾನ ಒಪ್ಪಂದ ಸಂಬಂಧಿತ ದಾಖಲೆಗಳನ್ನು ರಕ್ಷಣಾ ಸಚಿವಾಲಯದಿಂದ ಕಳುವು ಮಾಡಲಾಗಿದೆ ಹಾಗೂ ಆ ಬಗ್ಗೆ ತನಿಖೆ ಕೈಗೊಂಡಿರುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೇಳಿದೆ. ಮಾಹಿತಿಯನ್ನು ಮರೆಮಾಚಿರುವ ಕಾರಣ ದಾಖಲೆಗಳನ್ನು ಪ್ರಕಟಿಸಲಾಗಿದೆ ಎಂದಿದ್ದಾರೆ.

ADVERTISEMENT
ಎನ್‌.ರಾಮ್‌

‘ನೀವು ಇವುಗಳನ್ನು ಕದ್ದಿರುವ ದಾಖಲೆಗಳು ಎನ್ನಬಹುದು...ಆ ಬಗ್ಗೆ ನಮಗೆ ಕಳವಳವಿಲ್ಲ. ರಹಸ್ಯ ಮೂಲಗಳಿಂದ ನಾವು ಅವುಗಳನ್ನು ಪಡೆದಿದ್ದೇವೆ ಹಾಗೂ ಆ ಮೂಲಗಳನ್ನು ರಕ್ಷಿಸುವಲ್ಲಿ ನಾವು ಬದ್ಧರಾಗಿದ್ದೇವೆ. ಆ ಮೂಲಗಳ ಬಗ್ಗೆ ನಮ್ಮಿಂದ ಯಾರೊಬ್ಬರೂ ಯಾವುದೇ ಮಾಹಿತಿ ಪಡೆಯಲು ಸಾಧ್ಯವಿಲ್ಲ. ಆದರೆ, ಸ್ವತಃ ದಾಖಲೆ ಹಾಗೂ ಲೇಖನಗಳೇ ನುಡಿಯುತ್ತಿವೆ’ ಎಂದು ರಾಮ್‌ ಪಿಟಿಐಗೆ ಹೇಳಿದ್ದಾರೆ.

ರಾಮ್ ಅವರು ರಫೇಲ್‌ ಒಪ್ಪಂದದ ಕುರಿತು ಸರಣಿ ಲೇಖನಗಳನ್ನು ಬರೆದಿದ್ದು, ಬುಧವಾರ ಸಹ ಲೇಖನವೊಂದು ಪ್ರಕಟಗೊಂಡಿದೆ.

ದಾಖಲೆಗಳು ಕಳುವಾಗಿರುವ ಕುರಿತು ‘ಅಧಿಕೃತ ರಹಸ್ಯ ಕಾಯ್ದೆ’ ಅನ್ವಯ ಸರ್ಕಾರ ತನಿಖೆ ನಡೆಸುತ್ತಿದೆ. ಈ ದಾಖಲೆಗಳನ್ನು ಮಾಧ್ಯಮಗಳು ಪ್ರಕಟಿಸಿರುವುದು ‘ಅಧಿಕೃತ ರಹಸ್ಯ ಕಾಯ್ದೆ’ಯ ಉಲ್ಲಂಘನೆ’ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಸುಪ್ರೀಂ ಕೋರ್ಟ್‌ಗೆ ಹೇಳಿದ್ದಾರೆ.ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಮರುಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಬುಧವಾರ ನಡೆಸಿತು.

‘ನಾವು ಪ್ರಕಟಿಸಿರುವುದು ಅಧಿಕೃತ ದಾಖಲೆಗಳು. ಸಾರ್ವಜನಿಕ ಹಿತಾಸಕ್ತಿಯ ಅಗತ್ಯ ಮಾಹಿತಿ ಅಥವಾ ವಿಚಾರಗಳನ್ನು ತನಿಖಾ ಪತ್ರಿಕೋದ್ಯಮದ ಮೂಲಕ ಹೊರಗೆ ತರುವುದು ಮಾಧ್ಯಮದ ಕರ್ತವ್ಯ.ಭಾರತದ ಸಂವಿಧಾನವು ನೀಡಿರುವ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ನಾವು ಪ್ರಕಟಿಸಿರುವ ವರದಿಗೆ ರಕ್ಷಣೆ ಇದೆ. ಮಾಹಿತಿ ಹಕ್ಕು ಕಾಯ್ದೆಯೂ ಅಗತ್ಯ ರಕ್ಷಣೆ ಒದಗಿಸುತ್ತದೆ’ ಎಂದು ರಾಮ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.