ADVERTISEMENT

ಕಿರುಕುಳಕ್ಕೆ ಶಾ ಸಂಚು: ಮಮತಾ ಆಕ್ರೋಶ

ಕೇಂದ್ರ ಗೃಹ ಸಚಿವರ ವಿರುದ್ಧ ಮಮತಾ ಆಕ್ರೋಶ

ಪಿಟಿಐ
Published 16 ಮಾರ್ಚ್ 2021, 19:31 IST
Last Updated 16 ಮಾರ್ಚ್ 2021, 19:31 IST
ಬಂಕುರಾದಲ್ಲಿ ಮಂಗಳವಾರ ನಡೆದ ಟಿಎಂಸಿ ಪ್ರಚಾರ ಸಭೆಯಲ್ಲಿ ಜನರನ್ನು ಉದ್ದೇಶಿಸಿ ಮಮತಾ ಬ್ಯಾನರ್ಜಿ ಅವರು ಮಾತನಾಡಿದರು -ಪಿಟಿಐ ಚಿತ್ರ
ಬಂಕುರಾದಲ್ಲಿ ಮಂಗಳವಾರ ನಡೆದ ಟಿಎಂಸಿ ಪ್ರಚಾರ ಸಭೆಯಲ್ಲಿ ಜನರನ್ನು ಉದ್ದೇಶಿಸಿ ಮಮತಾ ಬ್ಯಾನರ್ಜಿ ಅವರು ಮಾತನಾಡಿದರು -ಪಿಟಿಐ ಚಿತ್ರ   

ರಾಯಪುರ/ಛತ್ನಾ (ಪಶ್ಚಿಮ ಬಂಗಾಳ): ‘ಟಿಎಂಸಿ ಮುಖಂಡರಿಗೆ ಕಿರುಕುಳ ನೀಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಚು ರೂಪಿಸುತ್ತಿದ್ದಾರೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಇಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು, ಅಮಿತ್ ಶಾ ವಿರುದ್ಧ ಹರಿಹಾಯ್ದಿದ್ದಾರೆ. ‘ರಾಜ್ಯದಲ್ಲಿ ಅಮಿತ್ ಶಾ ಅವರ ಪ್ರಚಾರ ಸಭೆಗಳಿಗೆ ಜನರು ಬರುತ್ತಿಲ್ಲ. ಇದರಿಂದ ಅಮಿತ್‌ ಶಾ ಹತಾಶೆಗೊಂಡಿದ್ದಾರೆ. ಕೋಲ್ಕತ್ತದಲ್ಲಿ ಕೂತು, ಟಿಎಂಸಿ ನಾಯಕರಿಗೆ ಕಿರುಕುಳ ನೀಡುವುದಕ್ಕೆ ಸಂಚು ರೂಪಿಸುತ್ತಿದ್ದಾರೆ’ ಎಂದು ಮಮತಾ ಆರೋಪಿಸಿದ್ದಾರೆ.

‘ದೇಶವನ್ನು ಮುನ್ನಡೆಸುವುದು ಬಿಟ್ಟು, ಕೇಂದ್ರ ಸಚಿವರಿಗೆ ಇಲ್ಲೇನು ಕೆಲಸ? ಅವರಿಗೆ ಏನು ಬೇಕು? ನನ್ನನ್ನು ಕೊಲ್ಲಬೇಕಿದೆಯೇ? ನನ್ನನ್ನು ಕೊಲ್ಲುವ ಮೂಲಕ ಚುನಾವಣೆ ಗೆಲ್ಲಬಹುದು ಎಂದು ಅವರು ಅಂದುಕೊಂಡಿದ್ದರೆ, ಅದು ಸುಳ್ಳು. ನನ್ನ ಮೇಲೆ ಅವರು ಎಷ್ಟೇ ದಾಳಿ ನಡೆಸಿದರೂ, ಟಿಎಂಸಿಯನ್ನು ಗೆಲ್ಲಿಸುವ ಪ್ರಯತ್ನವನ್ನು ನಾನು ಬಿಡುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಬಹುಶಃ ಅಮಿತ್ ಶಾ ಅವರು ಚುನಾವಣಾ ಆಯೋಗವನ್ನು ಮುನ್ನಡೆಸುತ್ತಿದ್ದಾರೆ. ಆಯೋಗಕ್ಕೆ ಶಾ ಅವರೇ ನಿರ್ದೇಶನ ನೀಡುತ್ತಿದ್ದಾರೆಯೇ? ಆಯೋಗದ ಸ್ವಾತಂತ್ರ್ಯಕ್ಕೆ ಏನಾಯಿತು? ನನ್ನ ಭದ್ರತಾ ನಿರ್ದೇಶಕರನ್ನು ಶಾ ಅವರ ಆಣತಿಯ ಮೇರೆಗೇ ಆಯೋಗ ತೆರವು ಮಾಡಿದೆ’ ಎಂದು ಅವರು ಆರೋಪಿಸಿದ್ದಾರೆ.

‘ಶಾ ಅವರಿಗೆ ಕೇಂದ್ರದಲ್ಲಿ ಮಾಡಲು ಕೆಲಸವಿಲ್ಲವೇ? ಶಾ ಅವರು ಇಲ್ಲಿ ಅಧಿಕಾರಿಗಳಿಗೆ ಕಿರುಕುಳ ನೀಡುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರದ ನಾಯಕರು ಇಲ್ಲೆಲ್ಲಾ ಕೊಠಡಿಗಳನ್ನು ಕಾಯ್ದಿರಿಸಿದ್ದಾರೆ. ಅಧಿಕಾರಿಗಳಿಗೆ, ಟಿಎಂಸಿ ಅಭ್ಯರ್ಥಿಗಳಿಗೆ ಮತ್ತು ನಾಯಕರಿಗೆ ಸಿಬಿಐ, ಜಾರಿ ನಿರ್ದೇಶನಾಲಯದಿಂದ ನೋಟಿಸ್‌ ಕೊಡಿಸುತ್ತಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.

‘ಅಮಿತ್ ಶಾ ಅವರ ತಂತ್ರಗಳು ಚುನಾವಣಾ ಆಯೋಗಕ್ಕೆ ಗೊತ್ತಾಗುತ್ತಿಲ್ಲವೇ? ಅಥವಾ ಆಯೋಗವು ಬಿಜೆಪಿಯ ಒಂದು ಉಪಕರಣವಾಗಿ ಬದಲಾಗಿದೆಯೇ’ ಎಂದು ಮಮತಾ ಪ್ರಶ್ನಿಸಿದ್ದಾರೆ.

‘ಪ್ರಚಾರ ಸಭೆಗಳಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಭಾಗವಹಿಸಲು ಚುನಾವಣಾ ಅಧಿಕಾರಿಗಳು ಬಿಡುತ್ತಿಲ್ಲ. ಚುನಾವಣಾ ಆಯೋಗದ ದೈನಂದಿನ ಕೆಲಸದಲ್ಲಿ ಬಿಜೆಪಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ, ಆಯೋಗದ ಕಚೇರಿ ಎದುರು ಮುರಿದ ಕಾಲಿನಲ್ಲೇ ಧರಣಿ ಕೂರುತ್ತೇನೆ’ ಎಂದು ಮಮತಾ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.