ADVERTISEMENT

ಗಂಗೂಲಿ ಬಿಜೆಪಿಗೆ ಸೇರುತ್ತಾರೆಯೇ? ಕೊನೆಗೂ ಮೌನ ಮುರಿದ ವರಿಷ್ಠರು

ಏಜೆನ್ಸೀಸ್
Published 3 ಮಾರ್ಚ್ 2021, 7:27 IST
Last Updated 3 ಮಾರ್ಚ್ 2021, 7:27 IST
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (ಚಿತ್ರ ಕೃಪೆ: ಎಎಫ್‌ಪಿ)
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (ಚಿತ್ರ ಕೃಪೆ: ಎಎಫ್‌ಪಿ)   

ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೂ ಮುನ್ನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯಾಗುತ್ತಾರೆಂಬ ಊಹಾಪೋಹಗಳು ದಟ್ಟವಾಗಿತ್ತು. ಈ ಸಂಬಂಧ ಕೊನೆಗೂ ಮೌನ ಮುರಿದಿರುವ ಬಿಜೆಪಿ, ಅಂತಹ ಸಾಧ್ಯತೆಗಳನ್ನು ಅಲ್ಲಗಳೆದಿದೆ.

'ನನಗೆ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪಕ್ಷದ ಸಭೆಯಲ್ಲಿ ಯಾವುದೇ ರೀತಿಯ ಚರ್ಚೆಯೂ ನಡೆದಿಲ್ಲ' ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಸ್ಪಷ್ಟಪಡಿಸಿದ್ದಾರೆ.

ಮಾರ್ಚ್ 7ರಂದು ಕೋಲ್ಕತ್ತದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ರ‍್ಯಾಲಿಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಭಾಗವಹಿಸಲಿದ್ದಾರೆ ಎಂಬ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು.

ADVERTISEMENT

ಜನವರಿ ತಿಂಗಳಲ್ಲಿ ಸೌರವ್ ಗಂಗೂಲಿ ಎರಡು ಬಾರಿ ಲಘು ಹೃದಯಾಘಾತಕ್ಕೆ ಒಳಗಾಗಿದ್ದರು. ಅಲ್ಲದೆ ಆ್ಯಂಜಿಯೊಪ್ಲಾಸ್ಟಿ ನಡೆಸಿ ಸ್ಟಂಟ್ ಆಳವಡಿಸಲಾಗಿತ್ತು. ಜನವರಿ 31ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಗಂಗೂಲಿ, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಏತನ್ಮಧ್ಯೆ ಪಶ್ಚಿಮ ಬಂಗಾಳ ಮೊದಲ ಹಾಗೂ ಎರಡನೇ ಹಂತದ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಹೆಸರುಗಳನ್ನು ಕೋರ್ ಕಮಿಟಿ ಶೀಘ್ರದಲ್ಲೇ ಪ್ರಕಟಿಸಲಿದೆ ಎಂದು ದಿಲೀಪ್ ಘೋಷ್ ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 17ರಿಂದ ಆರಂಭವಾಗಿ ಏಪ್ರಿಲ್ 29ರ ವರೆಗೆ ಎಂಟು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಮೇ 2ರಂದು ಮತ ಎಣಿಕೆ ನಡೆಯಲಿದ್ದು, ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.