ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ‘ಕ್ಲೀನ್‌ಸ್ವೀಪ್’ ಮಾಡಿದೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ನೀಡಿದ್ದ ಉತ್ತಮ ಸಾಧನೆಯನ್ನು ಮುಂದುವರಿಸಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವು ರಾಯ್‌ಗಂಜ್, ಬಾಗ್ದಾ ಮತ್ತು ರಾಣಾಘಾಟ್ ದಕ್ಷಿಣ ಕ್ಷೇತ್ರಗಳನ್ನು ಬಿಜೆಪಿಯಿಂದ ಕಸಿದುಕೊಂಡರೆ, ಮಾನಿಕ್ತಾಲಾ ಕ್ಷೇತ್ರವನ್ನು ದಾಖಲೆಯ ಅಂತರದಿಂದ ಗೆದ್ದು ತನ್ನಲ್ಲೇ ಉಳಿಸಿಕೊಂಡಿದೆ.
ಬಾಗ್ದಾ ಕ್ಷೇತ್ರದಲ್ಲಿ ಟಿಎಂಸಿಯಿಂದ ಕಣಕ್ಕಿಳಿದ 25 ವರ್ಷದ ಮಧುಪರ್ಣಾ ಠಾಕೂರ್ ಅವರು 33,445 ಮತಗಳಿಂದ ಬಿಜೆಪಿ ಅಭ್ಯರ್ಥಿಯನ್ನು ಮಣಿಸಿದರು. ಟಿಎಂಸಿ ರಾಜ್ಯಸಭಾ ಸದಸ್ಯೆ, ಮತುವಾ ಸಮುದಾಯದ ನಾಯಕಿ ಮಮತಾ ಬಾಲಾ ಠಾಕೂರ್ ಅವರ ಪುತ್ರಿಯಾಗಿರುವ ಮಧುಪರ್ಣಾ ಅವರು ಪಶ್ಚಿಮ ಬಂಗಾಳ ವಿಧಾನಸಭೆಗೆ ಆಯ್ಕೆಯಾದ ಅತಿ ಕಿರಿಯ ಶಾಸಕಿ ಎನಿಸಿಕೊಂಡರು.
ತಮ್ಮ ಸಂಬಂಧಿಯೂ ಆಗಿರುವ ಬಿಜೆಪಿ ನಾಯಕ, ಕೇಂದ್ರ ಸಚಿವ ಶಂತನು ಠಾಕೂರ್ ವಿರುದ್ಧ ಧರಣಿ ಮಾಡುವ ಮೂಲಕ ಮಧುಪರ್ಣಾ ಅವರು ಮೂರು ತಿಂಗಳ ಹಿಂದೆಯಷ್ಟೇ ಸಾರ್ವಜನಿಕ ಜೀವನ ಆರಂಭಿಸಿದ್ದರು.
ತಾಯಿ ಕುಟುಂಬಸ್ಥರು ವಾಸವಿದ್ದ ಮನೆಯಿಂದ ತಮ್ಮನ್ನು ಹಾಗೂ ತಾಯಿಯನ್ನು ಬಲವಂತವಾಗಿ ಹೊರಹಾಕಲು ಶಂತನು ಪ್ರಯತ್ನಿಸುತ್ತಿದ್ದಾರೆ ಎಂದು ಮಧುಪರ್ಣಾ ಆರೋಪಿಸಿದ್ದರು. ಈ ಸಂಬಂಧ ಮಮತಾ ಬಾಲಾ ನೀಡಿದ್ದ ದೂರಿನ ಮೇರೆಗೆ ಶಂತನು ಠಾಕೂರ್ ವಿರುದ್ಧ ಪಶ್ಚಿಮ ಬಂಗಾಳ ಪೊಲೀಸರು
ಪ್ರಕರಣವನ್ನೂ ದಾಖಲಿಸಿದ್ದರು.
ಮತುವಾ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರವನ್ನು ಟಿಎಂಸಿ ಎಂಟು ವರ್ಷಗಳ ಬಳಿಕ
ತನ್ನದಾಗಿಸಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.