ADVERTISEMENT

ಸೆಂಥಿಲ್‌ರನ್ನು ಭಯೋತ್ಪಾದಕರಂತೆ ಬಂಧಿಸಿ ವಿಚಾರಣೆ ನಡೆಸುವ ಅಗತ್ಯ ಏನಿತ್ತು ? -ಸ್ಟಾಲಿನ್

ಪಿಟಿಐ
Published 15 ಜೂನ್ 2023, 11:01 IST
Last Updated 15 ಜೂನ್ 2023, 11:01 IST
ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್
ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್    ಕಡತ ಚಿತ್ರ

ಚೆನ್ನೈ: ತಮಿಳುನಾಡಿನ ಇಂಧನ, ಅಬಕಾರಿ ಸಚಿವ ವಿ.ಸೆಂಥಿಲ್‌ ಬಾಲಾಜಿ ಅವರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಕೈಗೊಂಡಿರುವ ಕ್ರಮವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಗದೊಮ್ಮೆ ಖಂಡಿಸಿದ್ದಾರೆ.

ಈ ಪ್ರಕರಣವನ್ನು ಇ.ಡಿ ನಿರ್ವಹಿಸಿದ ರೀತಿಯನ್ನು ಸ್ಟಾಲಿನ್ ಟೀಕೆ ಮಾಡಿದ್ದಾರೆ.

ಸೆಂಥಿಲ್ ಬಾಲಾಜಿ ಅವರಿಗೆ ಇ.ಡಿಯಿಂದ ಅನ್ಯಾಯವಾಗುತ್ತಿರುವ ಬಗ್ಗೆ ನಿಮಗೆಲ್ಲರಿಗೂ ಗೊತ್ತಿದೆ. ಇದು ನಿಷ್ಠುರವಾದ ರಾಜಕೀಯ ಹಗೆತನ ಎಂಬುದರಲ್ಲಿ ಅನುಮಾನವೇ ಇಲ್ಲ ಎಂದು ಸ್ಟಾಲಿನ್ ಪ್ರತಿಕ್ರಿಯಿಸಿದ್ದಾರೆ.

ADVERTISEMENT

10 ವರ್ಷಗಳ ಹಿಂದಿನ ಪ್ರಕರಣದಲ್ಲಿ ಸೆಂಥಿಲ್ ಅವರನ್ನು ಬಂಧಿಸಿ ಮಾನಸಿಕ ಹಿಂಸೆಗೆ ಒಳಪಡಿಸಲಾಯಿತು. ಇ.ಡಿ ಹಿಂಸೆಯಿಂದಾಗಿ ಸೆಂಥಿಲ್ ಮಾನಸಿಕ ಹಾಗೂ ದೈಹಿಕವಾಗಿ ನಿಶಕ್ತರಾಗಿದ್ದಾರೆ. ಹೃದ್ರೋಗ ಸಮಸ್ಯೆ ಎದುರಾಗಿದೆ. ಇದಕ್ಕಿಂತ ಲಜ್ಜೆಗೆಟ್ಟ ರಾಜಕೀಯ ದ್ವೇಷವಿದೆಯೇ ಎಂದು ಸ್ಟಾಲಿನ್ ಹೇಳಿದ್ದಾರೆ.

ಬಾಲಾಜಿ ಅವರನ್ನು ಉಗ್ರನಂತೆ ಬಂಧಿಸಿ ವಿಚಾರಿಸುವ ಅಗತ್ಯ ಏನಿತ್ತು ? ಇ.ಡಿ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಲು ಸಿದ್ಧ ಎಂದು ಹೇಳಿದ್ದರು. ಹೀಗಿದ್ದರೂ 18 ಗಂಟೆಗಳ ಕಾಲ ಜನಪ್ರತಿನಿಧಿಯನ್ನು ವಶದಲ್ಲಿರಿಸಲಾಗಿತ್ತು. ಯಾರನ್ನೂ ಭೇಟಿಯಾಗಲು ಬಿಡಲಿಲ್ಲ. ಆರೋಗ್ಯ ಹದೆಗೆಟ್ಟಾಗ ಆಸ್ಪತ್ರೆಗೆ ಕರೆದೊಯ್ದರು. ಇ.ಡಿ ನಿರ್ಲಕ್ಷ್ಯದಿಂದ ಅವರ ಪ್ರಾಣಕ್ಕೆ ಅಪಾಯ ಎದುರಾಗಿತ್ತು ಎಂದು ಹೇಳಿದರು.

ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಘೋಷಣೆಯಾಗಿತ್ತೇ? ತುರ್ತಾಗಿ ವಿಚಾರಣೆಗೆ ಒಳಪಡಿಸುವ ಪರಿಸ್ಥಿತಿ ಇತ್ತೇ? ಇ.ಡಿ ಬಳಸಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಬಿಜೆಪಿಯ ರಾಜಕೀಯ ಜನ ವಿರೋಧಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿ ಜಾರಿ ನಿರ್ದೇಶನಾಲಯದಿಂದ (ಇ.ಡಿ) ಬುಧವಾರ ಬಂಧನಕ್ಕೆ ಒಳಗಾದ ತಮಿಳುನಾಡಿನ ಇಂಧನ, ಅಬಕಾರಿ ಸಚಿವ ವಿ.ಸೆಂಥಿಲ್‌ ಬಾಲಾಜಿ ಅವರನ್ನು ಇದೇ 28ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.