ನವದೆಹಲಿ:‘ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಸ್ನೇಹ ಎಂಥದ್ದು? ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರನ್ನು‘ನನ್ನ ನೆಚ್ಚಿನ ಫೀಲ್ಡ್ ಮಾರ್ಷಲ್’ ಎಂದು ಹೊಗಳುವ ಮೂಲಕ ಟ್ರಂಪ್, ಭಾರತಕ್ಕೆ ಯಾವ ರೀತಿಯ ಸಂದೇಶ ನೀಡುತ್ತಿದ್ದಾರೆ’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
‘ಒಂದೆಡೆ, ಮೋದಿಯನ್ನು ತಮ್ಮ ಅತ್ಯುತ್ತಮ ಸ್ನೇಹಿತ ಎಂದು ಟ್ರಂಪ್ ಹೇಳುತ್ತಲೇ ಇದ್ದಾರೆ. ಇನ್ನೊಂದೆಡೆ ಮೋದಿ ಕೂಡ, ಟ್ರಂಪ್ ಅವರನ್ನು ಮೆಚ್ಚಿಸಲು ವಿಫಲ ಯತ್ನಗಳನ್ನು ಮುಂದುವರಿಸಿದ್ದಾರೆ. ಈ ನಡುವೆ, ಈಜಿಪ್ಟ್‌ನಲ್ಲಿ ನಡೆದ ಗಾಜಾ ಶೃಂಗಸಭೆಯಲ್ಲಿ ಟ್ರಂಪ್, ಪಾಕಿಸ್ತಾನವನ್ನೂ ಅಲ್ಲಿನ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥರನ್ನು ಮುಕ್ತ ಕಂಠದಿಂದ ಶ್ಲಾಘಿಸುತ್ತಾರೆ. ಹಾಗಾದರೆ, ಮೋದಿ–ಟ್ರಂಪ್ ಗೆಳೆತನ ಯಾವ ರೀತಿಯದ್ದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ‘ಎಕ್ಸ್’ನಲ್ಲಿ ಪ್ರಶ್ನಿಸಿದ್ದಾರೆ.
ಪಹಲ್ಗಾಮ್ ದಾಳಿಯ ನಂತರದ ದಿನಗಳಲ್ಲಿ ಟ್ರಂಪ್ ಅವರು ಶ್ರೇತಭವನದಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಮುನೀರ್ ಅವರಿಗೆ ಆತಿಥ್ಯ ನೀಡಿದ್ದರು. ನಂತರ, ಅಕ್ಟೋಬರ್ 1ರಂದು ಎರಡನೆಯ ಬಾರಿ ಟ್ರಂಪ್ ಶ್ವೇತಭವನದಲ್ಲಿ ಮುನೀರ್ ಅವರನ್ನು ಭೇಟಿಯಾಗಿದ್ದರು. ಈಗ ಮೂರನೆಯ ಬಾರಿಯೂ, ಈಜಿಪ್ಟ್‌ನಲ್ಲಿ ನಡೆದ ಸಭೆಯಲ್ಲಿ ಟ್ರಂಪ್ ಪಾಕಿಸ್ತಾನ ಮತ್ತು ಮುನೀರ್ ಅವರನ್ನು ಹಾಡಿ ಹೊಗಳಿದ್ದಾರೆ. ಹಾಗಾದರೆ ಮೋದಿ–ಟ್ರಂಪ್ ನಡುವೆ ಇರುವುದು ಯಾವ ರೀತಿಯ ಗೆಳೆತನ ಎಂದು ಜೈರಾಂ ರಮೇಶ್ ಪ್ರಶ್ನಿಸಿದ್ದಾರೆ.
ಈಜಿಪ್ಟ್ ಶೃಂಗದಲ್ಲಿ ಆಸಿಮ್ ಮುನೀರ್ ಗೈರಾಗಿದ್ದರು. ಅವರ ಅನುಪಸ್ಥಿತಿ ಇದ್ದರೂ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರತ್ತ ನೋಡಿ, ‘ಮುನೀರ್ ನನ್ನ ನೆಚ್ಚಿನ ಪೀಲ್ಡ್ ಮಾರ್ಷಲ್’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.