ADVERTISEMENT

ನೈತಿಕ ಜವಾಬ್ದಾರಿ, ಸಾಂವಿಧಾನಿಕ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಣೆ: ಕಿರಣ್ ಬೇಡಿ

ಕೇಂದ್ರಕ್ಕೆ ಧನ್ಯವಾದ ಸಲ್ಲಿಸಿದ ಮಾಜಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ

ಪಿಟಿಐ
Published 17 ಫೆಬ್ರುವರಿ 2021, 5:45 IST
Last Updated 17 ಫೆಬ್ರುವರಿ 2021, 5:45 IST
ಕಿರಣ್ ಬೇಡಿ
ಕಿರಣ್ ಬೇಡಿ   

ಪುದುಚೇರಿ: ಪುದುಚೇರಿಯ ಲೆಫ್ಟಿನೆಂಟ್‌ ಗರ್ವನರ್‌ ಹುದ್ದೆಯಿಂದ ನಿರ್ಗಮಿಸುತ್ತಿರುವ ಮಾಜಿ ಐಪಿಎಸ್‌ ಅಧಿಕಾರಿ ಕಿರಣ್ ಬೇಡಿ ಅವರು ಬುಧವಾರ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ.

ಪುದುಚೇರಿಯಂತಹ ಕೇಂದ್ರಾಡಳಿತ ಪ್ರದೇಶದಲ್ಲಿ ಲೆಫ್ಟಿನೆಂಟ್ ಗವರ್ನರ್ ಆಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ಜೀವನದಲ್ಲಿ ಒಂದು ವಿಶಿಷ್ಟ ಅನುಭವವಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತಿದ್ದೇನೆ ಎಂದಿದ್ದಾರೆ.

‘ನಾನು ಸಾಂವಿಧಾನಿಕ ಮತ್ತು ನೈತಿಕ ಜವಾಬ್ದಾರಿಯಿಂದ ಕರ್ತವ್ಯಗಳನ್ನು ನಿರ್ವಹಿಸಿದ್ದೇನೆ. ನನಗೆ ಸಹಕಾರ ನೀಡಿ ಕೆಲಸ ಮಾಡಿದವರಿಗೂ ಈ ಸಂದರ್ಭದಲ್ಲಿ ಧನ್ಯವಾದ ಹೇಳುತ್ತೇನೆ’ ಎಂದು ಬೇಡಿ ತಿಳಿಸಿದ್ದಾರೆ.

ADVERTISEMENT

ಬೇಡಿ ಅವರು ತಮ್ಮ ಅಧಿಕಾರಾವಧಿಯಲ್ಲಿ 'ಟೀಮ್ ರಾಜ್ ನಿವಾಸ್‘ ಸಾರ್ವಜನಿಕ ಹಿತಾಸಕ್ತಿಗಾಗಿ ಹೆಚ್ಚಿನ ಶ್ರದ್ಧೆಯಿಂದ ಕೆಲಸ ಮಾಡಿದೆ ಎಂಬ ತೃಪ್ತಿ ಇದೆ ಎಂದು ಹೇಳಿದ್ದಾರೆ.

ಚುನಾಯಿತ ಸರ್ಕಾರ ಹಾಗೂ ವಿಶೇಷವಾಗಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಬೇಡಿ ಅವರು, ‘ನಾನು ನನ್ನ ಕರ್ತವ್ಯಗಳನ್ನು ಸಾಂವಿಧಾನಿಕ ಮತ್ತು ನೈತಿಕ ಜವಾಬ್ದಾರಿಯಿಂದ ಮಾಡಿದ್ದೇನೆ‘ ಎಂದು ತಿಳಿಸಿದ್ದಾರೆ.

‘ಪುದುಚೇರಿ ಕೇಂದ್ರಾಡಳಿತ ಪ್ರದೇಶಕ್ಕೆ ಉಜ್ವಲ ಭವಿಷ್ಯವಿದೆ‘ ಎಂದಿರುವ ಅವರು, ‘ಇಂಥ ಭವಿಷ್ಯವನ್ನು ರೂಪಿಸುವುದು ಜನರ ಕೈಯಲ್ಲಿದೆ‘ ಎಂದಿದ್ದಾರೆ. ಜತೆಗೆ ‘ಪುದುಚೇರಿ ಸಮೃದ್ಧವಾಗಿ ಬೆಳೆಯಲಿ‘ ಎಂದು ಹಾರೈಸಿದ್ದಾರೆ.

ಮಂಗಳವಾರ ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ ಪುದುಚೇರಿಯ ಲೆಫ್ಟಿನೆಂಟ್ ಗರ್ವನರ್ ಹುದ್ದೆಯಿಂದ ಕಿರಣ್ ಬೇಡಿ ಅವರನ್ನು ವಜಾಗೊಳಿಸಲಾಯಿತು. ರಾಷ್ಟ್ರಪತಿ ಭವನದಿಂದಲೇ ಈ ಅಧಿಕೃತ ಅದೇಶ ಪ್ರಕಟಗೊಂಡಿತು. ಈ ಘಟನೆ ನಡೆಯುವ ವಾರದ ಹಿಂದೆ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಅವರು ಕಿರಣ್ ಬೇಡಿ ಅವರನ್ನು ವಾಪಸ್ ಕರೆಸಿಕೊಳ್ಳುವಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಒತ್ತಾಯಿಸಿದ್ದರು.

ಕಿರಣ್ ಬೇಡಿ ವಜಾಗೊಂಡಿದ್ದನ್ನು ‘ಇದು ಪ್ರಜೆಗಳ ಹಕ್ಕಿಗೆ ದೊರೆತ ಜಯ‘ ಎಂದು ಮುಖ್ಯಮಂತ್ರಿ ವಿ. ನಾರಾಯಣ ಸ್ವಾಮಿ ಹೇಳಿದ್ದಾರೆ.

ಬೇಡಿಯವರಿಂದ ತೆರವಾಗಿರುವ ಜಾಗಕ್ಕೆ ಹೊಸಬರು ನೇಮಕವಾಗುವವರೆಗೂ ತೆಲಂಗಾಣದ ರಾಜ್ಯಪಾಲರಾದ ತಮಿಳ್‌ಸಾಯಿ ಸೌಂದರ್‌ರಾಜನ್ ಅವರಿಗೆ ಪುದುಚೇರಿಯ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.