ADVERTISEMENT

ಉದಾರವಾದಿಗಳ ಮೌನವೇಕೆ: ವಾರಿಸ್ ಪಠಾಣ್ ಹೇಳಿಕೆಗೆ ಬಿಜೆಪಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2020, 10:42 IST
Last Updated 21 ಫೆಬ್ರುವರಿ 2020, 10:42 IST
ವಾರಿಸ್ ಪಠಾಣ್, ದೇವೇಂದ್ರ ಫಡಣವೀಸ್ ಮತ್ತು ಬಿಜೆಪಿ ಇತರ ನಾಯಕರು ಇರುವ ಚಿತ್ರ
ವಾರಿಸ್ ಪಠಾಣ್, ದೇವೇಂದ್ರ ಫಡಣವೀಸ್ ಮತ್ತು ಬಿಜೆಪಿ ಇತರ ನಾಯಕರು ಇರುವ ಚಿತ್ರ   

ನವದೆಹಲಿ: ‘ಎಐಎಂಐಎಂ ನಾಯಕ ವಾರಿಸ್ ಪಠಾಣ್ ಅವರ ಕೋಮುಭಾವನೆ ಕೆರಳಿಸುವಂತಹ ಹೇಳಿಕೆ ಬಗ್ಗೆ ಉದಾರವಾದಿಗಳು ಎಂದು ಕರೆದುಕೊಳ್ಳುವವರು ಮೌನವಾಗಿ ಇರುವುದೇಕೆ’ ಎಂದು ಬಿಜೆಪಿ ನಾಯಕ ಸಂಬಿತ್ ಪಾತ್ರಾ ಪ್ರಶ್ನಿಸಿದ್ದಾರೆ.

‘ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿಕಲಬುರ್ಗಿಯಲ್ಲಿಫೆಬ್ರುವರಿ 16ರಂದು ಪ್ರತಿಭಟನಾ ರ‍್ಯಾಲಿ ಆಯೋಜಿಸಲಾಗಿತ್ತು. ಈ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದ ವಾರಿಸ್, ‘ಇತರ 100 ಕೋಟಿ ಜನರ ಮೇಲೆ ಪ್ರಾಬಲ್ಯ ಸಾಧಿಸಲು 15 ಕೋಟಿಯಷ್ಟಿರುವ ಮುಸ್ಲಿಮರು ಸಾಕು’ ಎಂದು ಹೇಳಿದ್ದರು. ಈ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಹೇಳಿಕೆ ಇರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ADVERTISEMENT

‘ಸಿಎಎ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳ ಹಿಂದಿನ ಸಂಚನ್ನು ಈ ಹೇಳಿಕೆ ಬಹಿರಂಗಪಡಿಸಿದೆ. ಶಾಹೀನ್ ಬಾಗ್‌ನ ರಸ್ತೆಗಳಲ್ಲಿ ಕುಳಿತಿರುವ ಮಹಿಳೆಯರನ್ನು ಇವರು ಗುರಾಣಿಯಂತೆ ಬಳಸಿಕೊಳ್ಳುತ್ತಿದ್ದಾರೆ. ಈ ಮೂಲಕ ಕೋಮುದ್ವೇಷವನ್ನು ಹರಡುತ್ತಿದ್ದಾರೆ’ ಎಂದು ಪಾತ್ರಾ ಆರೋಪಿಸಿದ್ದಾರೆ.

ವಾರಿಸ್ ಹೇಳಿಕೆ ವೈರಲ್ ಆಗುತ್ತಿರುವ ಬೆನ್ನಲ್ಲೇ, ವಾರಿಸ್ ಅವರು ಮಹಾರಾಷ್ಟ್ರ ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್ ಜತೆ ಇರುವ ಚಿತ್ರಗಳೂ ವೈರಲ್ ಆಗುತ್ತಿವೆ. ವಾರಿಸ್ ಹೇಳಿಕೆ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.