ADVERTISEMENT

ಶೈಕ್ಷಣಿಕ ವಿಚಾರದಲ್ಲಿ ಹಸ್ತಕ್ಷೇಪ: ಬಿಸಿಐ ನಡೆಗೆ ಸುಪ್ರೀಂ ಕೋರ್ಟ್‌ ಅತೃಪ್ತಿ

ಪಿಟಿಐ
Published 29 ಏಪ್ರಿಲ್ 2025, 11:06 IST
Last Updated 29 ಏಪ್ರಿಲ್ 2025, 11:06 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ‘ಕಾನೂನು ಕಾಲೇಜುಗಳ ಶೈಕ್ಷಣಿಕ ವಿಚಾರಗಳಲ್ಲಿ ಹಸ್ತಕ್ಷೇಪ ನಡೆಸಿದ್ದಕ್ಕಾಗಿ’ ಭಾರತೀಯ ವಕೀಲರ ಪರಿಷತ್ತನ್ನು (ಬಿಸಿಐ) ಸುಪ್ರೀಂ ಕೋರ್ಟ್‌ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ. ಶೈಕ್ಷಣಿಕ ವಿಚಾರಗಳನ್ನು ಶಿಕ್ಷಣ ತಜ್ಞರಿಗೆ ಬಿಟ್ಟುಬಿಡಬೇಕು ಎಂದು ಹೇಳಿದೆ.

ಒಂದು ವರ್ಷದ ಎಲ್‌ಎಲ್‌ಎಂ ಕೋರ್ಸ್‌ ರದ್ದುಪಡಿಸಲು ಹಾಗೂ ವಿದೇಶಿ ಎಲ್‌ಎಲ್‌ಎಂಗಳ ಮಾನ್ಯತೆಯನ್ನು ಹಿಂಪಡೆಯಲು ಪರಿಷತ್ತು 2021ರಲ್ಲಿ ಕೈಗೊಂಡ ತೀರ್ಮಾನವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್. ಕೋಟೀಶ್ವರ ಸಿಂಗ್ ಅವರು ಇರುವ ವಿಭಾಗೀಯ ಪೀಠವು ನಡೆಸುತ್ತಿದೆ.

‘ನೀವು ಶೈಕ್ಷಣಿಕ ವಿಷಯಗಳಲ್ಲಿ ಏಕೆ ಮಧ್ಯಪ್ರವೇಶ ಮಾಡುತ್ತಿದ್ದೀರಿ? ಕಾನೂನು ಕಾಲೇಜುಗಳ ಪಠ್ಯಕ್ರಮ ಮತ್ತಿತರ ಸಂಗತಿಗಳನ್ನು ಪರಿಷತ್ತು ಏಕೆ ತೀರ್ಮಾನಿಸಬೇಕು? ಇವನ್ನು ಶಿಕ್ಷಣ ತಜ್ಞರು ಪರಿಶೀಲಿಸಬೇಕು. ಈ ದೇಶದಲ್ಲಿ ವಕೀಲರ ಬಹುದೊಡ್ಡ ವರ್ಗವಿದೆ. ಅವರ ಜ್ಞಾನವನ್ನು ಹೆಚ್ಚಿಸುವ, ಅವರಿಗೆ ತರಬೇತಿ ಕಾರ್ಯಕ್ರಮ ಆಯೋಜಿಸುವ ಶಾಸನಬದ್ಧವಾದ ಹೊಣೆಗಾರಿಕೆ ನಿಮ್ಮ ಮೇಲಿದೆ’ ಎಂದು ಪೀಠವು ಹೇಳಿತು.

ADVERTISEMENT

ಈಗಿನ ಕಾನೂನು ಶಿಕ್ಷಣ ವ್ಯವಸ್ಥೆಯಲ್ಲಿ ತಳಮಟ್ಟದಲ್ಲಿ ಉದ್ಯೋಗ ಪಡೆದುಕೊಳ್ಳುತ್ತಿರುವ ನ್ಯಾಯಾಂಗ ಅಧಿಕಾರಿಗಳ ಗುಣಮಟ್ಟದ ಬಗ್ಗೆಯೂ ಪೀಠವು ಅಸಮಾಧಾನ ವ್ಯಕ್ತಪಡಿಸಿತು.

‘ಕಾನೂನು ಶಿಕ್ಷಣ ವ್ಯವಸ್ಥೆಯಲ್ಲಿ ನ್ಯಾಯಾಂಗವು ಪ್ರಾಥಮಿಕ ಪಾಲುದಾರ... ನಮಗೆ ಎಂತಹ ಅಧಿಕಾರಿಗಳು ಸಿಗುತ್ತಿದ್ದಾರೆ? ಅವರನ್ನು ಸರಿಯಾಗಿ ಸಜ್ಜುಗೊಳಿಸಲಾಗುತ್ತಿದೆಯೇ? ಅವರಿಗೆ ಅನುಕಂಪ ಇದೆಯೇ? ಅವರಿಗೆ ತಳಮಟ್ಟದಲ್ಲಿನ ವಾಸ್ತವ ಅರ್ಥವಾಗುತ್ತದೆಯೇ ಅಥವಾ ಅವರು ಯಾಂತ್ರಿಕವಾಗಿ ಆದೇಶ ನೀಡುತ್ತಾರೆಯೇ’ ಎಂದು ಪ್ರಶ್ನಿಸಿತು. ಈ ವಿಚಾರಗಳನ್ನು ಶಿಕ್ಷಣ ತಜ್ಞರು ಪರಿಶೀಲಿಸಬಹುದು ಎಂದು ಹೇಳಿತು.

‘ನೀವು (ಭಾರತೀಯ ವಕೀಲರ ಪರಿಷತ್ತು) ನಿಮ್ಮ ಜವಾಬ್ದಾರಿ ಬಗ್ಗೆ ಗಮನ ಕೊಡಿ. ದೇಶದಲ್ಲಿ ಸರಿಸುಮಾರು 10 ಲಕ್ಷ ವಕೀಲರು ಇದ್ದಾರೆ. ನೀವು ಕಾನೂನು ಕಾಲೇಜುಗಳ ಪರಿಶೀಲನೆ ನಡೆಸುವ ಬದಲು ವಕೀಲರಿಗೆ ತರಬೇತಿ ನೀಡುವ ಬಗ್ಗೆ ಗಮನ ಕೊಡಿ’ ಎಂದು ಪೀಠ ಹೇಳಿತು. ವಿಚಾರಣೆಯನ್ನು ಜುಲೈಗೆ ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.