ADVERTISEMENT

ಅದಾನಿ ಪ್ರಕರಣದಲ್ಲಿ ಏಕಿಷ್ಟು ಭಯ? ಮೋದಿ ವಿರುದ್ಧ ರಾಹುಲ್‌ ಕಿಡಿ

ಪಿಟಿಐ
Published 27 ಮಾರ್ಚ್ 2023, 15:37 IST
Last Updated 27 ಮಾರ್ಚ್ 2023, 15:37 IST
ರಾಹುಲ್‌ ಗಾಂಧಿ 
ರಾಹುಲ್‌ ಗಾಂಧಿ    

ನವದೆಹಲಿ (ಪಿಟಿಐ): ‘ಅದಾನಿ ಸಮೂಹದ ವಿರುದ್ಧ ಹಲವು ಆರೋಪಗಳು ಕೇಳಿಬಂದ ನಂತರವೂ ಈ ದೇಶದ ನಾಗರಿಕರ ನಿವೃತ್ತಿಯ ಹಣವನ್ನು ಆ ಸಮೂಹದಲ್ಲಿ ಹೂಡಿಕೆ ಮಾಡಿದ್ದೇಕೆ. ಈ ಕುರಿತು ತನಿಖೆಗೆ ಆದೇಶಿಸಲು ಏಕೆ ಹಿಂದೇಟು ಹಾಕುತ್ತಿದ್ದೀರಿ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ಸೋಮವಾರ ಸರಣಿ ಟ್ವೀಟ್‌ ಮಾಡಿರುವ ಅವರು, ‘ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ), ಭಾರತೀಯ ಸ್ಟೇಟ್‌ ಬ್ಯಾಂಕ್ (ಎಸ್‌ಬಿಐ) ಹಾಗೂ ಇಪಿಎಫ್‌ಒ ಹಣವನ್ನೂ ಅದಾನಿ ಸಮೂಹದಲ್ಲಿ ಹೂಡಿಕೆ ಮಾಡಲಾಗಿದೆ. ‘ಮೋದಾನಿ’ಯ ನಂಟು ಬಹಿರಂಗಗೊಂಡ ಬಳಿಕವೂ ನಾಗರಿಕರ ನಿವೃತ್ತಿಯ ಹಣವನ್ನು ಅದಾನಿ ಸಮೂಹದಲ್ಲಿ ಹೂಡಿಕೆ ಮಾಡಿದ್ದೇಕೆ’ ಎಂದು ಪ್ರಶ್ನಿಸಿದ್ದಾರೆ.

‘ಪ್ರಧಾನಿಯವರೆ ಅದಾನಿ ಪ್ರಕರಣದ ಕುರಿತು ತನಿಖೆಗೂ ಆದೇಶಿಸುತ್ತಿಲ್ಲ. ಈ ಸಂಬಂಧ ಉತ್ತರವನ್ನೂ ನೀಡುತ್ತಿಲ್ಲ. ನಿಮಗೆ ಇಷ್ಟೊಂದು ಭಯ ಏಕೆ’ ಎಂದೂ ಕಿಡಿಕಾರಿದ್ದಾರೆ.

ADVERTISEMENT

ಅಧಿಕೃತ ಬಂಗಲೆ ತೆರವಿಗೆ ಸೂಚನೆ

‘ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಂಡಿರುವ ರಾಹುಲ್‌ ಗಾಂಧಿ ಅವರಿಗೆ ಏಪ್ರಿಲ್‌ 22ರೊಳಗೆ ಅಧಿಕೃತ ಬಂಗಲೆ ತೆರವುಗೊಳಿಸುವಂತೆ ಸೂಚಿಸಲಾಗಿದೆ’ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.

‘ತುಘಲಕ್‌ ಲೇನ್‌ನಲ್ಲಿರುವ ಬಂಗಲೆ ಖಾಲಿ ಮಾಡುವಂತೆ ಲೋಕಸಭೆಯ ವಸತಿ ಸಮಿತಿಯು ರಾಹುಲ್‌ ಅವರಿಗೆ ನೋಟಿಸ್‌ ಜಾರಿಗೊಳಿಸಿದೆ’ ಎಂದು ಹೇಳಿವೆ.

‘ಜನಪ್ರತಿನಿಧಿಯಾದವರು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡ ಒಂದು ತಿಂಗಳೊಳಗೆ ತಮಗೆ ಹಂಚಿಕೆ ಮಾಡಲಾಗಿರುವ ಅಧಿಕೃತ ನಿವಾಸವನ್ನು ತೊರೆಯಬೇಕೆಂಬ ನಿಯಮ ಇದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಬಂಗಲೆಯಲ್ಲಿ ಇನ್ನಷ್ಟು ಕಾಲ ಉಳಿದುಕೊಳ್ಳಲು ಅವಕಾಶ ಮಾಡಿಕೊಡುವಂತೆ ರಾಹುಲ್‌ ಅವರು ವಸತಿ ಸಮಿತಿಗೆ ಮನವಿ ಪತ್ರ ಸಲ್ಲಿಸಬಹುದು. ಇದನ್ನು ಸಮಿತಿ ಪರಿಶೀಲಿಸಲಿದೆ’ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.