ADVERTISEMENT

ವಯನಾಡ್‌: ಹಿಂಸಾರೂಪ ತಾಳಿದ ಹರತಾಳ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2024, 15:37 IST
Last Updated 17 ಫೆಬ್ರುವರಿ 2024, 15:37 IST
ಆನೆ ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಹಿನ್ನೆಲೆ ಜನರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು –ಪಿಟಿಐ ಚಿತ್ರ
ಆನೆ ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಹಿನ್ನೆಲೆ ಜನರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು –ಪಿಟಿಐ ಚಿತ್ರ   

ವಯನಾಡ್‌ (ಪಿಟಿಐ): ಮಾನವ–ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಹುಡುಕಲು ಆಡಳಿತಾರೂಢ ಎಲ್‌ಡಿಎಫ್‌, ವಿರೋಧ ಪಕ್ಷಗಳಾದ ಯುಡಿಎಫ್‌ ಮತ್ತು ಬಿಜೆಪಿ ಜಿಲ್ಲಾದ್ಯಂತ ಕರೆ ನೀಡಿದ್ದ ಹರತಾಳವು ಪುಳಪಳ್ಳಿಯಲ್ಲಿ ಶನಿವಾರ ಹಿಂಸಾತ್ಮಕ ರೂಪ ಪಡೆಯಿತು.

ಆನೆ ದಾಳಿಯಿಂದ ಸತತ ಮೂವರು ಮೃತಪಟ್ಟ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸ್ಥಳೀಯರು ವಿವಿಧೆಡೆ ರಸ್ತೆ ತಡೆ ನಡೆಸಿದರು. ಪುಳಪಳ್ಳಿಯಲ್ಲಿ ಅರಣ್ಯ ಇಲಾಖೆಯ ವಾಹನವನ್ನು ಅಡ್ಡಗಟ್ಟಿ ಹಾನಿ ಮಾಡಿದರು. ಆನೆ ದಾಳಿಯಿಂದ  ಶುಕ್ರವಾರ ಮೃತಪಟ್ಟಿದ್ದ ಪ್ರವಾಸೋದ್ಯಮ ಮಾರ್ಗದರ್ಶಿ ವಿ.ಪಿ ಪೌಲ್‌ ಎಂಬವರ ಶವವನ್ನು ಇಲಾಖೆಯ ವಾಹನದಲ್ಲಿ ಇಟ್ಟು ಪ್ರತಿಭಟಿಸಿದರು. ಜನರ ಜೀವ ಮತ್ತು ವಸ್ತುಗಳಿಗೆ ರಕ್ಷಣೆ ನೀಡುವಲ್ಲಿ ಇಲಾಖೆಯು ವಿಫಲವಾಗಿದೆ ಎಂದು ಆರೋಪಿಸಿದರು.

ಮೃತರ ಕುಟುಂಬಸ್ಥರಿಗೆ ₹10 ಲಕ್ಷ ಪರಿಹಾರ ನೀಡುವುದಾಗಿ ಅಧಿಕಾರಿಗಳು ತಿಳಿಸಿದ ನಂತರ ಪ್ರತಿಭಟನಕಾರರು ಶವ ಸಂಸ್ಕಾರಕ್ಕೆ ಅವಕಾಶ ನೀಡಿದರು. ಬಳಿಕ ₹50 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ADVERTISEMENT

ಇನ್ನೊಂದೆಡೆ, ಗುಂಪೊಂದು ಹುಲಿ ದಾಳಿಯಿಂದ ಮೃತಪಟ್ಟಿದೆ ಎನ್ನಲಾದ ಹಸುವಿನ ಕಳೇಬರವನ್ನು ಅರಣ್ಯ ಇಲಾಖೆಯ ಜೀಪಿನ ಬಾನಟ್‌ಗೆ ಕಟ್ಟಿ ಆಕ್ರೋಶ ಹೊರಹಾಕಿತು.

ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆಯೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಮಧ್ಯಪ್ರವೇಶಿಸಿದರು. ಜಿಲ್ಲೆಯಲ್ಲಿನ ಮಾನವ–ಪ್ರಾಣಿ ಸಂಘರ್ಷದ ಕುರಿತು ಚರ್ಚಿಸಲು ಮುಖ್ಯಮಂತ್ರಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಯಿತು.

ಅರಣ್ಯದ ಗಡಿಯುದ್ದಕ್ಕೂ 250 ಕಣ್ಗಾವಲು ಕ್ಯಾಮೆರಾಗಳನ್ನು ಇಡಲು ಮತ್ತು ವನ್ಯಪ್ರಾಣಿಗಳ ಹಾವಳಿ ಹೆಚ್ಚಿರುವ ಪ್ರದೇಶದಲ್ಲಿ ಅರಣ್ಯ ಮತ್ತು ಪೊಲೀಸ್‌ ಸಿಬ್ಬಂದಿ ನಿಯೋಜಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಜಿಲ್ಲೆಯಲ್ಲಿ ಕಳೆದ ಮೂರು ವಾರಗಳಲ್ಲಿ ಆನೆ ದಾಳಿಯಿಂದ ಮೂವರು ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.